ಸುಳ್ಯ ನಪಂ ಪೂರೈಸುವ ನೀರಿಗೆ ಸೀಮೆಎಣ್ಣೆ ವಾಸನೆ: ಬೆಟ್ಟಂಪಾಡಿ ಗ್ರಾಮಸ್ಥರ ಅಳಲು

Update: 2021-09-24 12:14 GMT

ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣ: ಸಮಸ್ಯೆ ಪರಿಹರಿಸಲು ಗ್ರಾಮಸ್ಥರ ಒತ್ತಾಯ

ಸುಳ್ಯ, ಸೆ.24: ಸುಳ್ಯ ನಗರ ಪಂಚಾಯತ್ ಗೆ ಸೇರಿದ ಕೊಳವೆಬಾವಿಯಿಂದ ಸರಬರಾಜಾಗುತ್ತಿರುವ ನೀರು ಸೀಮೆಎಣ್ಣೆಯ ವಾಸನೆಯಿಂದ ಕೂಡಿದ್ದು, ಬಳಕೆಗೆ ಅಯೋಗ್ಯವಾಗಿರುವ ವಿಲಕ್ಷಣ ಸನ್ನಿವೇಶವೊಂದು ನಪಂ ವ್ಯಾಪ್ತಿಯ ನಾಲ್ಕನೇ ವಾರ್ಡ್‌ ಬೆಟ್ಟಂಪಾಡಿಯಲ್ಲಿ ಉಂಟಾಗಿದೆ.

ಕೊಳವೆಬಾವಿಯಿಂದ ಸರಬರಾಜಾಗುವ ನೀರು ಸೀಮೆಎಣ್ಣೆ ವಾಸನೆ ಬರುತ್ತಿದೆ ಮಾತ್ರವಲ್ಲ, ಕುಡಿಯಲು ಯತ್ನಿಸಿದರೆ ಸೀಮೆಎಣ್ಣೆಯ ರುಚಿಯ ಅನುಭವ ಉಂಟಾಗುತ್ತಿದೆ ಎಂದು ಇಲ್ಲಿನ ಜನರು ದೂರಿಕೊಂಡಿದ್ದಾರೆ.

 ಕಳೆದ ಒಂದೂವರೆ ತಿಂಗಳಿನಿಂದ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಜನರು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ನೀರನ್ನು ಬಿಸಿ ಮಾಡಿದರೂ ವಾಸನೆ ಹೋಗುತ್ತಿಲ್ಲ. ಆ ನೀರಿನಲ್ಲಿ ಆಹಾರ ತಯಾರು ಮಾಡಿದರೆ ಆಹಾರವೂ ವಾಸನೆ ಬರುತ್ತದೆ ಮತ್ತು ಬೇಗನೆ ಆಹಾರ ಪದಾರ್ಥಗಳು ಬೇಗ ಕೆಟ್ಟು ಹೋಗುತ್ತವೆ ಎನ್ನುತ್ತಾರೆ ಸ್ಥಳೀಯರು.

ಬೆಟ್ಟಂಪಾಡಿಯ ನಗರ ಪಂಚಾಯತ್ ಕೊಳವೆಬಾವಿಯಿಂದ ನೀರೆತ್ತಿ ಟ್ಯಾಂಕ್ ಗೆ ಸರಬರಾಜು ಮಾಡಿ ಅಲ್ಲಿಂದ ಕೆಲವು ಮನೆಗಳಿಗೆ ಸರಬರಾಜು ಆಗುತ್ತದೆ. ಅಲ್ಲದೆ ಕೊಳವೆಬಾವಿಯಿಂದ ನೇರವಾಗಿಯೂ ಮನೆಗಳ ಟ್ಯಾಂಕ್ ಗಳಿಗೆ ನೀರು ಪೂರೈಕೆಯಾಗುತ್ತದೆ. ಬೆಟ್ಟಂಪಾಡಿಯ 130 ಮನೆ ಮತ್ತು ಸಮೀಪದ ಶಾಂತಿನಗರದ ಕೆಲವು ಮನೆಗಳು ಸೇರಿ ಸುಮಾರು 150ಕ್ಕೂ ಹೆಚ್ಚು ಮನೆಯರಿಗೆ ಈ ನೀರು ಸರಬರಾಜಾಗುತ್ತಿದ್ದು, ಇಲ್ಲಿನ ನಿವಾಸಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಕೆಲವರು ಹತ್ತಿರದ ಬಾವಿಯಿಂದ ನೀರು ತಂದು ಕುಡಿಯಲು, ಆಹಾರ ತಯಾರಿಕೆಗೆ ಬಳಸುತ್ತಿದ್ದಾರೆ.

ನೀರಿನ ಈ ಸಮಸ್ಯೆ ಬಗ್ಗೆ ನಗರ ಪಂಚಾಯತ್ ಗೆ ಸ್ಥಳೀಯರು ದೂರಿದ್ದು, ನಗರ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳು ಬಂದು ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದಾರೆ. ಸೀಮೆ ಎಣ್ಣೆ ವಾಸನೆಯಿಂದ ಅಡುಗೆ ಮಾಡಲು ಮಾತ್ರವಲ್ಲದೆ ಮುಖ ತೊಳೆಯಲು, ಸ್ನಾನ ಮಾಡಲೂ ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂಬುದು ಈ ಪ್ರದೇಶದ ಜನರು ಅಳಲು ತೋಡಿಕೊಂಡಿದ್ದಾರೆ.

 ಪಾತ್ರೆಗಳಲ್ಲಿ ನೀರು ಶೇಖರಿಸಿಟ್ಟರೆ ನೀರಿನ ಮೇಲ್ಪದರದಲ್ಲಿ ಎಣ್ಣೆಯ ಅಂಶ ಸೇರಿ ತೇಲುತ್ತಿರುತ್ತದೆ. ಶೇಖರಿಸಿಟ್ಟ ನೀರು ವಾಕರಿಕೆ ಬರುವಷ್ಟು ತೀವ್ರ ಸ್ವರೂಪದ ವಾಸನೆ ಹೊಂದಿದೆ. ಆದುದರಿಂದ ಕುಡಿಯುವ ನೀರಿಗೆ ನಪಂ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರಾದ ಶಂಕರ ಶಾಂತಿನಗರ, ಸುಧಾಕರ ಬೆಟ್ಟಂಪಾಡಿ ಮತ್ತು ಜನಾರ್ದನ ಬೆಟ್ಟಂಪಾಡಿ ಎಂಬವರು ಒತ್ತಾಯಿಸಿದ್ದಾರೆ.


''ಕಳೆದ ಒಂದೂವರೆ ತಿಂಗಳಿನಿಂದ ಈ ರೀತಿ ನೀರು ಸೀಮೆಎಣ್ಣೆ ವಾಸನೆಯಿಂದ ಉಪಯೋಗಿಸಲು ಆಗುತ್ತಾ ಇಲ್ಲ. ಈ ನೀರನ್ನು ಉಪಯೋಗಿಸಿದರೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಸಮಸ್ಯೆ ಬಗ್ಗೆ ಸೂಕ್ತ ಪರೀಕ್ಷೆ ಆಗಬೇಕು ಮತ್ತು ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.''

-ಆನಂದ ಬೆಟ್ಟಂಪಾಡಿ, ಸ್ಥಳೀಯರು'


'ಬೆಟ್ಟಂಪಾಡಿ ಭಾಗದಲ್ಲಿ ಕೊಳವೆಬಾವಿ ನೀರು ಸೀಮೆಎಣ್ಣೆ ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು''

-ವಿನಯಕುಮಾರ್ ಕಂದಡ್ಕ,

ಅಧ್ಯಕ್ಷರು, ನಗರ ಪಂಚಾಯತ್ ಸುಳ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News