ಆದೇಶಗಳನ್ನು ಪಾಲಿಸದ್ದಕ್ಕೆ ವೈದ್ಯಾಧಿಕಾರಿ ವಿರುದ್ಧ ಬಂಧನ ವಾರಂಟ್‌ ಜಾರಿಗೊಳಿಸಿದ ಮಾಹಿತಿ ಆಯೋಗ

Update: 2021-09-24 12:31 GMT

ಭೋಪಾಲ್: ಎರಡು ವರ್ಷಗಳ ಅವಧಿಯಲ್ಲಿ ಹೊರಡಿಸಲಾಗಿದ್ದ ವಿವಿಧ ಆದೇಶಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬುರ್ಹಾನ್‍ಪುರ್ ಜಿಲ್ಲೆಯ  ಮುಖ್ಯ ವೈದ್ಯಾಧಿಕಾರಿ ಮತ್ತು ಆರೋಗ್ಯಾಧಿಕಾರಿ ಡಾ ವಿಕ್ರಮ್ ಸಿಂಗ್ ವರ್ಮ ಅವರ ವಿರುದ್ಧ ಮಧ್ಯಪ್ರದೇಶ ರಾಜ್ಯ ಮಾಹಿತಿ ಆಯೋಗ ಬಂಧನ ವಾರಂಟ್ ಜಾರಿಗೊಳಿಸಿದೆ. ಇದರ ಹೊರತಾಗಿ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಆಯುಕ್ತ ಆಕಾಶ್ ತ್ರಿಪಾಠಿ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿರುವ ಆಯೋಗ ತನ್ನ ಆದೇಶಗಳನ್ನು ನಿರ್ಲಕ್ಷ್ಯಿಸಿದ್ದಕ್ಕಾಗಿ ಆಯೋಗದೆದುರು ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.

ಬುರ್ಹಾನ್‍ಪುರ್ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ಚಾಲಕರ ನೇಮಕಾತಿ ಮತ್ತು ಪೋಸ್ಟಿಂಗ್ ಕುರಿತಾದ ಮಾಹಿತಿಯನ್ನು ಆರ್‍ಟಿಐ ಅರ್ಜಿ ಮುಖಾಂತರ ಸದಾಶಿವ ಸೋನವನೆ ಎಂಬವರು ಆಗಸ್ಟ್ 10, 2017ರಂದು ಕೇಳಿದ್ದರು. ಆದರೆ ನಿರ್ದಿಷ್ಟ 30 ದಿನಗಳೊಳಗೆ ಡಾ ವರ್ಮ ಉತ್ತರ ನೀಡಿರಲಿಲ್ಲ. ಇದರ ನಂತರ  ಸದಾಶಿವ ಅವರು ಮೊದಲ ಅಪೀಲು ಪ್ರಾಧಿಕಾರದ ಮೊರೆ ಹೋಗಿದ್ದರು. ಪ್ರಾಧಿಕಾರ ಅಕ್ಟೋಬರ್ 7, 2017ರಂದು ಹೊರಡಿಸಿದ ಆದೇಶದಲ್ಲಿ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದ್ದರೂ ಪ್ರತಿಕ್ರಿಯೆ ಬಾರದೇ ಇದ್ದಾಗ ಅರ್ಜಿದಾರರು ರಾಜ್ಯ ಮಾಹಿತಿ ಆಯೋಗಕ್ಕೆ ದೂರಿದ್ದರು. ಆಯೋಗವು ಮುಖ್ಯ ವೈದ್ಯಾಧಿಕಾರಿಗೆ ಡಿಸೆಂಬರ್ 2020ರಲ್ಲಿ ರೂ 25,000 ದಂಡ ವಿಧಿಸಿತ್ತಲ್ಲದೆ ಈ ಮೊತ್ತವನ್ನು  ವೈದ್ಯಾಧಿಕಾರಿಯ ವೇತನದಿಂದ ಕಡಿತಗೊಳಿಸುವಂತೆ ಸೂಚಿಸಿತ್ತು.

ಆದರೆ ಯಾವುದೇ ಆದೇಶ ಪಾಲನೆಯಾಗದೇ ಇರುವುದರಿಂದ ಅಸಮಾಧಾನಗೊಂಡ ರಾಜ್ಯ ಮಾಹಿತಿ ಆಯೋಗ ಇದೀಗ  ಇದೀಗ ಡಾ ವರ್ಮ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News