ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರತಿಪಕ್ಷದ ಆರೋಪ ದುರುದ್ದೇಶಪೂರಿತ: ಸುಧೀರ್ ಶೆಟ್ಟಿ

Update: 2021-09-24 12:26 GMT

ಮಂಗಳೂರು, ಸೆ.24: ಮಹಾನಗರ ಪಾಲಿಕೆಯ ಮುಂದಿನ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದ್ದು, ಈ ಹಂತದಲ್ಲೇ ಮನಪಾ ಪ್ರತಿಪಕ್ಷ ಸದಸ್ಯರು ಹಾಗೂ ಮಾಜಿ ಶಾಸಕರು ಆರೋಪ ಮಾಡುತ್ತಿರುವುದು ದುರುದ್ದೇಶಪೂರಿತವಾಗಿದೆ ಎಂದು ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಆರೋಪಿಸಿದ್ದಾರೆ.

ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಪಿಆರ್ ತಯಾರಿಸಿ ಮಹಾನಗರ ಪ್ಯಾಕೇಜ್ ಮಾಡಿ ಸವಿಸ್ತಾರವಾಗಿ ಚರ್ಚಿಸಿ ಎರಡನೇ ಪ್ಯಾಕೇಜ್‌ಗೆ ಅನುಮೋದನೆ ಮಾಡಲಾಗಿದೆ. 38ಕೋಟಿ ರೂ. ವೆಚ್ಚದ ಈ ಯೋಜನೆ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಮಹಾನಗರಪಾಲಿಕೆ ಅನುದಾನದೊಂದಿಗೆ ನಡೆಯಲಿದೆ. ವಾಹನವನ್ನು ಮಹಾನಗರಪಾಲಿಕೆ ಖರೀದಿಸಿ, 4 ಪ್ಯಾಕೇಜ್ ಮಾಡಿ ಟೆಂಡರ್ ಕರೆದು ವಾರ್ಷಿಕ ನಿರ್ವಹಣೆ ಮತ್ತು ಇಂಧನ ಹಾಕಿ ನಿರ್ವಹಣೆ ಮಾಡಲಾಗುವುದು. ಗುತ್ತಿಗೆದಾರರು ಸರಿಯಾಗಿ ಕಸ ಸಂಗ್ರಹ ನಿರ್ವಹಿಸದಿದ್ದಲ್ಲಿ ಟೆಂಡರ್ ರದ್ದುಗೊಳಿಸಬಹುದಾಗಿದೆ. ಈ ಯೋಜನೆ ಡಿಪಿಆರ್ ಸಿದ್ಧಗೊಂಡಿದ್ದು, ಮುಂದೆ ಜಿಲ್ಲಾಧಿಕಾರಿಗ ಮುಖಾಂತರ ಸರಕಾರಕ್ಕೆ ಕಳುಹಿಸಿ ಡಿಎಮ್‌ಎಯಲ್ಲಿ ಎಸ್‌ಎಲ್‌ಟಿಸಿ, ಹೈ ಪವರ್ ಕಮಿಟಿ, ಸರಕಾರದ ಆದೇಶ ಬಂದ ಮೇಲೆ ಟೆಂಡರ್ ಕರೆಯಲಾಗುತ್ತದೆ. ಆದರೆ ಈ ಹಂತದಲ್ಲೇ ಪ್ರತಿಪಕ್ಷ ವಿನಯರಾಜ್ ಮತ್ತು ಮಾಜಿ ಶಾಸಕ ಜೆ.ಆರ್. ಲೋಬೋ ಯೋಜನೆ ಬಗ್ಗೆ ಆಪಾದನೆ ಮಾಡುವುದು ಸರಿಯಲ್ಲ ಮತ್ತು ಸತ್ಯಕ್ಕೆ ದೂರವಾದ ವಿಚಾರ ಎಂದರು.

ಮಾಜಿ ಶಾಸಕರಾದ ಜೆ.ಆರ್. ಲೋಬೋ ರಾಜಕೀಯ ಬೇಳೆ ಬೇಯಿಸಲು ನಮ್ಮ ಶ್ರದ್ಧಾ ಕೇಂದ್ರವಾದ ರಾಮಕೃಷ್ಣ ಮಠದ ಹೆಸರನ್ನು ಬಳಸಿ ರಾಜಕೀಯ ಮಾಡಿರುವುದು ಖಂಡನೀಯ. ಈಗಾಗಲೇ ಮಹಾನಗರಪಾಲಿಕೆ ಆಡಳಿತ ರಾಮಕೃಷ್ಣ ಸ್ವಾಮೀಜಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವು ವರ್ಷಗಳಿಂದ ತಾಂತ್ರಿಕ ಸಮಸ್ಯೆಗಳಿಂದ ಬಾಕಿಯಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸಿದೆ. ಘನತ್ಯಾಜ್ಯ ಮುಂದಿನ ಯೋಜನೆಗೆ ಸಂಬಂಧಪಟ್ಟಂತೆ ಮುಂದಿನ ಸಾಮಾನ್ಯ ಸಭೆಯ ಮೊದಲು ಮೇಯರ್ ಅವರ ಅಧ್ಯಕ್ಷತೆಯಲ್ಲಿ ಸಂಘಸಂಸ್ಥೆ ಹಾಗೂ ಸಾರ್ವಜನಿಕರನ್ನೊಳಗೊಂಡ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಅಗತ್ಯಬಿದ್ದಲ್ಲಿ ತಿದ್ದುಪಡಿಯೊಂದಿಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ರಾಧಾಕೃಷ್ಣ ಕೆ., ಬಿಜೆಪಿ ಮಂಗಳೂರು ನಗರ ದಕ್ಷಿಣಾ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿಜಯ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News