ಖಾಯಂಗೊಳಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರಿಂದ ಧರಣಿ
ಉಡುಪಿ, ಸೆ.24: ಸ್ಕೀಮ್ ನೌಕರರ ಅಖಿಲ ಭಾರತ ಮುಷ್ಕರ ಭಾಗವಾಗಿ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ನಡೆಸಲಾಯಿತು.
ಬಳಿಕ ಈ ಕುರಿತು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಜಿಲ್ಲಾ ಖಂಜಾಚಿ ಶಶಿಧರ್ ಗೊಲ್ಲ, ಸಿಐಟಿಯು ಉಡುಪಿ ತಾಲೂಕು ಕಾರ್ಯ ದರ್ಶಿ ಕವಿರಾಜ್ ಎಸ್., ಅಕ್ಷರ ದಾಸೋಹ ಸಂಘದ ಅಧ್ಯಕ್ಷೆ ಸುನಂದಾ, ಕಮಲ, ಕಲಾವತಿ, ಗಿರಿಜಾ ಉಪಸ್ಥಿತರಿದ್ದರು.
ಕುಂದಾಪುರ: ಕುಂದಾಪುರ ತಹಸಿಲ್ದಾರರ ಕಛೇರಿ ಎದುರು ನಡೆದ ಧರಣಿ ಯನ್ನುದ್ದೇಶಿಸಿ ಮಾತನಾಡಿದ ನೌಕರರ ಸಂಘದ ಮುಖಂಡೆ ಜಯಶ್ರೀ, ಅಕ್ಷರ ದಾಸೋಹ ನೌಕರರಿಗೆ ಕಳೆದ 4 ತಿಂಗಳಿಂದ ವೇತನ ಕೊಡದೇ ಸರಕಾರವೇ ಶೋಷಣೆ ನಡೆಸುತ್ತಿದೆ. ಕರೋನದ ಸಂಕಷ್ಟದ ಕಾಲದಲ್ಲೂ ಸರಕಾರಕ್ಕೆ ನಮ್ಮ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ದೂರಿದರು.
ಸರಕಾರ ನೌಕರರನ್ನು ಶಾಲೆಗಳಲ್ಲಿ ಡಿ ಗ್ರೂಪ್ ನೌಕರರೆಂದು ನೇಮಕ ಮಾಡಿ ಖಾಯಂಗೊಳಿಸುತ್ತಿಲ್ಲ. ಬಿಸಿಯೂಟ ನೌಕರರಿಗೆ ಎಲ್ಐಸಿ ಆಧಾರಿತ ಪಿಂಚಣಿ ಜಾರಿ ಮಾಡಬೇಕು. ಇಂಡಿಯನ್ ಲೇಬರ್ ಕಾನ್ಪರೇನ್ಸ್ 45ನೇ ಹಾಗು 46ನೇ ಅಧಿವೇಶನದ ಶಿಫಾರಸ್ಸಿನಂತೆ ಯೋಜನೆಯ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ,ಕನಿಷ್ಟವೇತನ 21000ರೂ. ನೀಡಬೇಕು. ಭವಿಷ್ಯನಿಧಿ, ಇಎಸ್ಐ ಜಾರಿ ಮಾಡಿ ನೌಕರರಿಗೆ ಸರಕಾರ ರಕ್ಷಣೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ತಹಶಿಲ್ದಾರ್ ಕಿರಣ್ ಗೋರಯ್ಯ ಅವರ ಮೂಲಕ ಈ ಕುರಿತ ಮನವಿಯನ್ನು ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಮುಖಂಡರಾದ ನಾಗರತ್ನ, ಸಿಂಗಾರಿ, ಆಶಾ ತೆಕ್ಕಟ್ಟೆ, ಲತಾ ಹೊಸಂಡಿ, ದಾಸ ಭಂಡಾರಿ ಉಪಸ್ಥಿತರಿದ್ದರು.
ಬೈಂದೂರು: ಬೈಂದೂರು ತಹಶೀಲ್ದಾರ್ ಕಚೇರಿ ಎದುರು ನಡೆದ ಅಕ್ಷರ ದಾಸೋಹ ನೌಕರರ ಸಂಘದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಜಯಶ್ರೀ ಪಡುವರಿ, ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ, ಬಜೆಟ್ನಲ್ಲಿ ಅನುದಾನ ಹೆಚ್ಚಳ ಮಾಡಬೇಕು. ಈ ನೌಕರರಿಗೆ ಶಾಲಾ ಶಿಬ್ಬಂದಿಗಳೆಂದು ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿದರು. ತಹಶೀಲ್ದಾರ್ ಶೋಭಾ ಲಕ್ಷ್ಮಿ ಮೂಲಕ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಮುಖಂಡರಾದ ಸಿಂಗಾರಿ ನಾವುಂದ, ಶಾರದಾ ಶಿರೂರು ಮೊದಾದವರು ಉಪಸ್ಥಿತರಿದ್ದರು.