ಉಡುಪಿ ಬಿಟ್ಟು ಹೋಗುವಂತೆ ಜೀವ ಬೆದರಿಕೆ: ತಬಸ್ಸುಮ್ ಆರೋಪ
ಉಡುಪಿ, ಸೆ.24: ‘ಉಡುಪಿಯಲ್ಲಿ ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಕೆಲವೊಂದು ವ್ಯಕ್ತಿಗಳು ಜೀವ ಬೆದರಿಕೆಯೊಡ್ಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತಬಸ್ಸುಮ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಬಿಜೆಪಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದೆನು. ಬಳಿಕ ಬೇರೆ ಕಾರಣಗಳಿಗಾಗಿ ಪಕ್ಷ ಬಿಟ್ಟು ಬಂದಿದ್ದೇನೆ. ಇದೀಗ ಕೆಲವೊಂದು ವ್ಯಕ್ತಿಗಳು ನಾನು ಉಡುಪಿಯಲ್ಲಿ ಕೆಲಸ ಮಾಡದಂತೆ ಬೆದರಿಕೆ ಹಾಕುತ್ತಿದ್ದಾರೆ. ಇದು ಯಾವುದಕ್ಕೂ ನಾನು ಹೆದರುವುದಿಲ್ಲ. ಮುಂದೆ ಈ ವ್ಯಕ್ತಿಗಳ ಹೆಸರು ಬಹಿರಂಗ ಪಡಿಸಲಾಗುವುದು ಎಂದರು.
ನಾನು ಯಾರಿಗೂ ಮೋಸ ಮಾಡಿಲ್ಲ. ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇನೆ. ಇದನ್ನು ಸಹಿಸದ ವ್ಯಕ್ತಿಗಳು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ನನ್ನ ಹೋರಾಟ ಹಾಗೂ ಸಮಾಜ ಸೇವೆಯನ್ನು ಇಲ್ಲಿಯೇ ಇದ್ದು ಮುಂದುವರೆಸುತ್ತೇನೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಕೋಶಾಧಿಕಾರಿ ಗುಲ್ಫಮ್, ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹಮೀದ್, ಸದಸ್ಯ ರಫೀಕ್ ಹಾಜರಿದ್ದರು.