ವಾರದೊಳಗೆ ಎರಡನೇ ಬಾರಿ ರಾಹುಲ್, ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾದ ಸಚಿನ್ ಪೈಲಟ್

Update: 2021-09-24 14:52 GMT

ಹೊಸದಿಲ್ಲಿ: ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ವಾರದೊಳಗೆ ಎರಡನೇ ಬಾರಿ ಪಕ್ಷದ ಸಹೋದ್ಯೋಗಿಗಳಾದ ರಾಹುಲ್ ಗಾಂಧಿ ಹಾಗೂ  ಪ್ರಿಯಾಂಕಾ ಗಾಂಧಿಯವರನ್ನು ಶುಕ್ರವಾರ ಭೇಟಿಯಾದರು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರದಲ್ಲಿ ಸಂಪುಟ ಪುನರ್ರಚನೆಯಾಗಲಿದೆ ಎಂಬ ಊಹಾಪೋಹಗಳ ನಡುವೆ ಮಾಜಿ ಉಪ ಮುಖ್ಯಮಂತ್ರಿ ಪೈಲಟ್ ದಿಲ್ಲಿಗೆ ಆಗಮಿಸಿ ಪ್ರಮುಖ ನಾಯಕರನ್ನು ಭೇಟಿಯಾಗಿದ್ದಾರೆ.

ಪೈಲಟ್ ಅವರು  ಗುಜರಾತ್ ನಂತಹ ಚುನಾವಣೆಗಳು ನಡೆಯಲಿರುವ ರಾಜ್ಯದಲ್ಲಿ ಸಾಂಸ್ಥಿಕ ಹುದ್ದೆಯನ್ನು ಪಡೆಯುವ ಸಾಧ್ಯತೆ ಇದೆ. ನೆರೆಯ ಪಂಜಾಬ್‌ನಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಬಿಕ್ಕಟ್ಟನ್ನು ಇತ್ಯರ್ಥಗೊಳಿಸಿದ ಕೆಲವು ದಿನಗಳ ನಂತರ ಪೈಲಟ್ ಹಾಗೂ  ಗಾಂಧಿಯವರ ನಡುವೆ ದಿಲ್ಲಿಯ ನಿವಾಸದಲ್ಲಿ ಚರ್ಚೆಗಳು ನಡೆದಿವೆ.

44ರ ವಯಸ್ಸಿನ  ಪೈಲಟ್ ಕಾಂಗ್ರೆಸ್ಸಿನ  ಗುಜರಾತ್ ಪ್ರಚಾರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆಯೇ ಎಂಬುದು ತಿಳಿದಿಲ್ಲ. ಆದಾಗ್ಯೂ ಅವರು ರಾಜಸ್ಥಾನದಲ್ಲಿ ತಮ್ಮದೇ ಆದ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಥಾನದಲ್ಲಿ 70 ವಯಸ್ಸಿನ  ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿದ್ದಾರೆ.

ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ತನ್ನ ಆಡಳಿತದಲ್ಲಿರುವ  ಎರಡು ರಾಜ್ಯಗಳಾದ ರಾಜಸ್ಥಾನ ಹಾಗೂ  ಛತ್ತೀಸ್‌ಗಡದಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ನಡೆಸುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಪೈಲಟ್ ತನ್ನ ನಿಷ್ಠಾವಂತರು ರಾಜಸ್ಥಾನ ಮಂತ್ರಿಮಂಡಲಕ್ಕೆ ಸೇರುವುದನ್ನು ಬಯಸುತ್ತಿದ್ದು, ಗಾಂಧಿಯವರೊಂದಿಗಿನ 40 ನಿಮಿಷಗಳ ಭೇಟಿಯ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News