ಭಟ್ಕಳದಲ್ಲಿ ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆ ಪ್ರಕ್ರಿಯೆಗೆ ಚಾಲನೆ

Update: 2021-09-24 13:55 GMT

ಭಟ್ಕಳ: ಮಣಿಪಾಲ ಆರೋಗ್ಯ ಕಾರ್ಡ್ 2021ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಜಿಲ್ಲೆಯಲ್ಲಿನ ಜನರು ಹೆಚ್ಚು ಹೆಚ್ಚು ನೋಂದಣಿ ಮಾಡಿಸಿಕೊಳ್ಳುವಂತೆ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿಯವರು ಕೋರಿದರು. 

ಅವರು ಭಟ್ಕಳದಲ್ಲಿ ಮಣಿಪಾಲ ಆರೋಗ್ಯ ಕಾರ್ಡ ಸಂಬಂಧ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಮಣಿಪಾಲ ಆರೋಗ್ಯ ಕಾರ್ಡ್ 20 ವರ್ಷಗಳನ್ನು ಪೂರೈಸಿದ್ದು ಸಮುದಾಯಕ್ಕೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತಾ ಬಂದಿದೆ. ಕಳೆದ 20 ವರ್ಷಗಳಿಂದ ಸಾಮಾಜಿಕ ಕಾಳಜಿಯಿಂದ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ಸೇರಿಸಲು ಶಕ್ತರಾಗಿದ್ದೇವೆ ಎಂದರು. 

ಈ ವರ್ಷದ ನಮ್ಮ ಧ್ಯೇಯವಾಕ್ಯ "ಮಣಿಪಾಲ ಕಾರ್ಡ ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಟ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ" ಎನ್ನುವುದಾಗಿದೆ ಎಂದ ಅವರು ಇದು ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೇರಳ ಮತ್ತು ಗೋವಾ ರಾಜ್ಯಕ್ಕೂ ವಿಸ್ತರಣೆಯಾಗಿದ್ದು ಸದಸ್ಯತ್ವವನ್ನು ಪಡೆಯುತ್ತಿದ್ದೇವೆ ಎಂದರು. 

ಮಣಿಪಾಲ ಕಾರ್ಡ್ ಹೊಂದಿದವರು ಮಣಿಪಾಲ ಗ್ರೂಪ್‍ನ ಎಲ್ಲಾ ಆಸ್ಪತ್ರೆಗಳಲ್ಲಿಯೂ ಹೊರ ರೋಗಿಗಳ ವಿಭಾಗ ಮತ್ತು ಒಳ ರೋಗಿಗಳ ವಿಭಾಗದಲ್ಲಿಯೂ ರಿಯಾಯಿತಿ ಸೌಲಭ್ಯ ಪಡೆಯಬಹುದಾಗಿದ್ದು, ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆಯಲ್ಲಿ ಶೇ.50, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.30, ಸಿಟಿ, ಎಂ.ಆರ್.ಐ., ಅಲ್ಟ್ರಾಸೌಂಡ್‍ಗಳಲ್ಲಿ ಶೇ.20, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ.20, ಔಷಧಾಲಯಗಳಲ್ಲಿ ಶೇ.12ರವರೆಗೆ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ.25, ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್‍ನಲ್ಲಿ ರೋಗಿಗಳಿಗೆ ಸರ್ಕಾರ ಅನುಮೋದಿತ ಪ್ಯಾಕೇಜ್ ಮೇಲೆ ಶೇ.10 ರಿಯಾಯಿತಿ ದೊರೆಯುತ್ತದೆ ಎಂದರು. ಕಾರ್ಡ್ ಹೊಂದಿರುವವರು ಕರಾವಳಿ ಕರ್ನಾಟಕ ಮತ್ತು ಗೋವಾದ ಮಣಿಪಾಲ್ ಗ್ರೂಪ್ ಆಸ್ಪತ್ರೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಇದರಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ.ಎಂ.ಎ ಪೈ ಆಸ್ಪತ್ರೆ ಉಡುಪಿ ಮತ್ತು ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಅಂಬೇಡ್ಕರ್ ಸರ್ಕಲ್ ಮಂಗಳೂರು ಮತ್ತು ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲ್ ಮತ್ತು ಮಣಿಪಾಲ್ ಆಸ್ಪತ್ರೆ ಗೋವಾ, ಮಣಿಪಾಲ ಮತ್ತು ಮಂಗಳೂರಿನಲ್ಲಿರುವ ದಂತ ಚಿಕಿತ್ಸಾ ಆಸ್ಪತ್ರೆಗಳಲ್ಲಿ ರಿಯಾಯಿತಿ  ಪ್ರಯೋಜನಗಳನ್ನು ಪಡೆಯಬಹುದು. ಮಣಿಪಾಲ ಆರೋಗ್ಯ ಕಾರ್ಡ್‍ನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದು ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಪ್ರತಿನಿಧಿ ರಾಜೇಂದ್ರ ನಾಯ್ಕ ಅವರು 2021ರ ನೋಂದಾವಣಿಗಾಗಿ ಅರ್ಜಿಗಳನ್ನು ಅಧಿಕೃತ ಪ್ರತಿನಿಧಿಗಳಾದ ಸೈಂಟ್ ಮಿಲಾಗ್ರೇಸ್ ಸೌಹಾರ್ದದ ಎಲ್ಲಾ ಶಾಖೆಗಳು: ಭಟ್ಕಳ 9538894590, ಮುರುಡೇಶ್ವರ 9538020303, ಶಿರಾಲಿ : 8277099156. ರಾಧಾಕೃಷ್ಣ ಭಟ್ : 9448221117, ಗೌರಿಶಂಕರ ಮೊಗೆರ: 8722540496, ಯುವರಾಜ್:9964888755, ಶಾರದಾ ಪಿ.ಬಿ: 9343413629 ಮತ್ತು ಗಜಾನನ ಶೆಟ್ಟಿ: 9448530583 ಇವರಲ್ಲಿ ಲಭ್ಯವಿದೆ ಎಂದರು.     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News