ಸರಕಾರಿ ಯೋಜನೆಗಳ ಜತೆ ಸಾರ್ವಜನಿಕ ಸಹಭಾಗಿತ್ವವಿದ್ದಲ್ಲಿ ಸಂತೃಪ್ತ ಸೇವೆ ನೀಡಲು ಸಹಕಾರಿ: ಸಚಿವ ಸುನಿಲ್ ಕುಮಾರ್
ಕಾರ್ಕಳ: ಸರಕಾರಿ ಯೋಜನೆಗಳ ಜತೆ ಸಾರ್ವಜನಿಕ ಸಹಭಾಗಿತ್ವವಿದ್ದಲ್ಲಿ ಸಂತೃಪ್ತ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿಯ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಮತ್ತು ಸಂಘ ಸಂಸ್ಥೆಗಳ ಮತ್ತು ದಾನಿಗಳ ಸಹಕಾರದಿಂದ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 300 ಎಲ್‍ಪಿಎಂ ಸಾಮಥ್ರ್ಯದ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ನೆರವೇರಿಸಿ, ಮಾತನಾಡಿದರು.
ಉಭಯ ಜಿಲ್ಲೆಗಳಲ್ಲಿ ಮೊದಲ ಸೇವೆ ಆರಂಭಗೊಂಡಿರುವುದು ಕಾರ್ಕಳದಲ್ಲಿ. ಇನ್ನುಳಿದ ಕ್ಷೇತ್ರಗಳ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಸೌಲಭ್ಯಗಳನ್ನೊಳಗೊಂಡಂತಹ ಆರೋಗ್ಯ ಕೇಂದ್ರ ಇದಾಗಿದೆ. ಮೂರನೇ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಕ್ಕಳ ಐಸಿಯು ಸೆಂಟರ್ ಕೂಡಾ ಕಾರ್ಯಾರಂಭಗೊಳ್ಳಲಿದೆ ಎಂದರು.
ಕೊರೋನ ಎಂಬ ಮಹಾಮಾರಿ ಆರಂಭಗೊಂಡಂದಿನಿಂದ ಕೈಗೊಂಡ ಕ್ರಮಗಳ ಕುರಿತು ವಿವರಿಸಿದ ಸಚಿವರು, ಆರಂಭ ಹಂತದಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಿ, ರಾಜ್ಯಮಟ್ಟದಲ್ಲಿಯೇ ಪ್ರಶಂಸೆಗೆ ಕಾರಣವಾಗಿತ್ತು. ಮುಂದೆ ಸರಕಾರಿ ಆಸ್ಪತ್ರೆ ಹಾಗೂ ಇನ್ನಿತರ ಕಡೆಗಳಲ್ಲಿ ಆಕ್ಸಿಜನ್ ಬೆಡ್ ಸಹಿತ ಎಲಾ ಸೇವೆಗಳನ್ನು ಒದಗಿಸಲಾಗಿತ್ತು. ಪ್ರಸ್ತುತ ದಾನಿಗಳ ನೆರವಿನಿಂದ ಆಮ್ಲಜನಕ ಉತ್ಪಾದನಾ ಘಟಕ ಲೋಕಾರ್ಪಣೆಗೊಂಡಿದೆ. ಕಾರ್ಕಳ ಕ್ಷೇತ್ರದಲ್ಲಿ ಕೊರೋನದಿಂದ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿತ್ತು ಎಂದರು.
ದಾನಿಗಳ ಜತೆ ಸಂಘ ಸಂಸ್ಥೆಗಳ ಸಹಕಾರವನ್ನು ಶ್ಲಾಘಿಸಿದ ಸಚಿವರು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಸೇವೆಯಿಂದ ನಮ್ಮ ತಾಲೂಕಿನಲ್ಲಿ ಒಟ್ಟು 1,53,453( ಶೇ.90) ಜನತೆ ಪ್ರಥಮ ಡೋಸ್ ಲಸಿಕೆ ಪಡೆದಿದ್ದರೆ, 65,256 (ಶೇ.40) ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಕಾರ್ಕಳ ನಗರ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ ಒಟ್ಟು 10,594 ಮಂದಿ ಸೇವೆ ಪಡೆದಿದ್ದು, ಅವುಗಳ ಪೈಕಿ 856 ಜನ ಒಳರೋಗಿಯಾಗಿ, 236 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದರು.
ಇದೇ ಸಂದರ್ಭ ಟ್ರಸ್ಟ್ ಮೂಲಕ 50 ಲಕ್ಷ ಕೊಡಮಾಡಿದ ನಾಡೋಜ ಜಿ.ಶಂಕರ್ ಅವರನ್ನು ಮತ್ತು ಇನ್ನಿತರ ದಾನಿಗಳನ್ನು ಹಾಗೂ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಸಂಘಸಂಸ್ಥೆಗಳನ್ನು ಶಾಸಕರು ಅಭಿನಂದಿಸಿದರು.
ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಮಾತನಾಡಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕೊರೋನದ ಭೀಕರತೆ ಅನುಭವ ಆಗದ ರೀತಿಯಲ್ಲಿ ಸಚಿವರು ಕಾರ್ಯನಿರ್ವಹಿಸಿದ್ದರು. ಉಡುಪಿ, ಮಂಗಳೂರು ಮತ್ತು ಶಿವಮೊಗ್ಗ ಭಾಗದ ಜನತೆ ಬಾರೀ ತೊಂದರೆ ಅನುಭವಿಸಿದ್ದರು. ಜನಪರ ಕಾಳಜಿಯುಳ್ಳ ಸಚಿವರಿಂದ ಇನ್ನಷ್ಟು ಉತ್ತಮ ಕೆಲಸಕಾರ್ಯಗಳು ನಡೆಯಲಿ ಎಂದರು.
ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ಕೋವಿಡನ್ನು ಎದುರಿಸುವಲ್ಲಿ ಸಚಿವರು ನಡೆಸಿದ ಪ್ರಯತ್ನ ಶ್ಲಾಘನೀಯ ಎಂದರು.
ಮಂಗಳೂರು ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಸಂತೋಷ್ ಡಿಸಿಲ್ವ, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಉದ್ಯಮಿ ಬೋಳ ದಾಮೋದರ ಕಾಮತ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪ ಶೆಟ್ಟಿ, ತಾ.ಪಂ.ಸಿಇಒ ಗುರುದತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಶಶಾಂಕ್ ಸ್ವಾಗತಿಸಿದರು, ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಡಾ. ಮಾನಸ ಶ್ರೀರಾಮ್ ವಂದಿಸಿದರು.