ನವ ಮಂಗಳೂರು ಬಂದರನ್ನು ವಿಶ್ವದರ್ಜೆಗೇರಿಸುವ ಗುರಿ: ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್

Update: 2021-09-24 14:50 GMT

ಮಂಗಳೂರು: ನವ ಮಂಗಳೂರು ಬಂದರನ್ನು ದೇಶದ ಅತ್ಯಂತ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ವಿಶ್ವದರ್ಜೆಯ ಬಂದರಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಕೇಂದ್ರ ಸರ್ಕಾರದ ಬಂದರು, ನೌಕೆ, ಜಲಮಾರ್ಗ ಹಾಗೂ ಆಯುಷ್ ಸಚಿವರಾದ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.

ಅವರು ಇಂದು ಎನ್ ಎಂ ಪಿ ಟಿ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಪಣಂಬೂರು ಬಿ.ಡಿ.ಸಿ. ಕಟ್ಟಡದಲ್ಲಿ ಹಮ್ಮಿಕೊಂಡ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಆರ್ಥಿಕ ಅಭಿವೃದ್ಧಿಗೆ ರಫ್ತು ಚಟುವಟಿಕೆಗಳು ಹೆಚ್ಚು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಬಂದರಿನ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಬೇಕಾಗಿದೆ. ಮಂಗಳೂರು ಬಂದರು ಆಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಬಂದರಿನ ಟರ್ಮಿನಲ್ ಗಳ ಅಭಿವೃದ್ಧಿ, ಹೆಚ್ಚು ನೌಕೆಗಳು ಸಂಚಾರಕ್ಕೆ ಪೂರಕವಾದ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಮಂಗಳೂರು ಬಂದರಿನ ಪಕ್ಕ ಹರಿಯುತ್ತಿರುವ ಗುರುಪುರ ನದಿ ಬಂದರಿಗೆ ಪೂರಕವಾಗಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಉತ್ತಮ ಅವಕಾಶಗಳಿವೆ ಎಂದು ಸಚಿವ ಸೋನೊವಾಲ್ ತಿಳಿಸಿದ್ದಾರೆ.

ಎನ್ ಎಂ ಪಿಟಿಯಲ್ಲಿ 2300 ಕೋಟಿ ರೂ.ವೆಚ್ಚದಲ್ಲಿ ಗ್ಯಾಸ್ ಟರ್ಮಿನಲ್ ನಿರ್ಮಿಸುವ ಯೋಜನೆ ಸರಕಾರದ ಮುಂದಿದೆ ಎಂದು ತಿಳಿಸಿದ ಸಚಿವರು, ದೇಶದ ಆರ್ಥಿಕ ಅಭಿವೃದ್ಧಿಗೆ ಕರ್ನಾಟಕ ರಾಜ್ಯದ ಬಂದರುಗಳ ಮೂಲಕ ಕೊಡುಗೆ ನೀಡುತ್ತಿರುವುದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಅಭಿನಂದಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಮಂಗಳೂರು ಮೀನುಗಾರಿಕಾ ಬಂದರಿನ ಅಭಿವೃದ್ಧಿ ಗೆ ಕೇಂದ್ರ ಸರಕಾರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಸಚಿವ ಸೋನೊವಾಲ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಭಾಗವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮಂಗಳೂರು ಬಂದರು ಅಭಿವೃದ್ಧಿಗೆ ಪೂರಕವಾದ ಪ್ರಮುಖ ರಸ್ತೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಡೆಯುತ್ತಿದೆ. 2014ರಿಂದ 2021ರವರೆಗೆ ಮಂಗಳೂರಿನ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ 16 ಸಾವಿರ ಕೋಟಿ ರೂಪಾಯಿ ವಿನಿಯೋಗವಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗೆ ಮರುಚಾಲನೆ ದೊರೆತಿದೆ. 2024ರಲ್ಲಿ ಪೂರ್ಣಗೊಳ್ಳಲಿದೆ. ಶಿರಾಡಿ ಸುರಂಗ ಮಾರ್ಗದ ಡಿಪಿಆರ್ ಆಗಿದ್ದು ಮುಂದಿನ ಹಂತದ ಕೆಲಸ ನಡೆಯುತ್ತಿದೆ. ಮಂಗಳೂರು-ಪೊಳಲಿ-ಕಟೀಲು ಬೈಪಾಸ್ ರಸ್ತೆ ಕಾಮಗಾರಿ ಯೋಜನೆಯೂ ಅನುಷ್ಠಾನಗೊಳ್ಳಲಿದೆ. ಕೇಂದ್ರ ಸಚಿವರು ಈ ನಿಟ್ಟಿನಲ್ಕಿ ಸಹಕಾರ ನೀಡುತ್ತಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಎನ್ ಎಂಪಿಟಿಯ ಅಧ್ಯಕ್ಷ ಎ.ವಿ.ರಮಣ ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ಜಿ. ನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News