ಕ್ಯಾನ್ಸರ್‌ ನಿವಾರಕ ಔಷಧಿಯಾಗಿ ಹಡೆಬಳ್ಳಿ: ವಿಜ್ಞಾನಿಗಳ ಸಂಶೋಧನೆಯಿಂದ‌ ಮಂಗಳೂರು ವಿವಿಗೆ ಪ್ರಥಮ ಪೇಟೆಂಟ್

Update: 2021-09-24 15:27 GMT

ಕೊಣಾಜೆ: ಕರ್ನಾಟಕದ ಕರಾವಳಿ ಭಾಗದಲ್ಲಿ ಲಭ್ಯವಿರುವ ಹಡೆಬಳ್ಳಿ ಎಂಬ ಸಸ್ಯವು ಕ್ಯಾನ್ಸರ್ ನಿವಾರಕ ಔಷಧಿಯಾಗಿ ಗುರುತಿಸಿದ್ದು, ಇದರ ಬಗ್ಗೆ ವಿಜ್ಞಾನಿಗಳು ನಡೆಸಿದ ಸಂಶೋಧನಾತ್ಮಕ ಶುದ್ದೀಕರಣ ಪ್ರಕ್ರಿಯೆಗೆ ಮಂಗಳೂರು ವಿವಿಯು ಪ್ರಥಮ ಪೇಟೆಂಟ್ ಪಡೆದುಕೊಂಡಿದೆ.

ಮಂಗಳೂರು ವಿಶ್ವ ವಿದ್ಯಾನಿಲಯದ ಸಸ್ಯ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ. ಕೆ. ಆರ್ ಚಂದ್ರಶೇಖರ್ ಮತ್ತು ಹಾಗೂ ಅದೇ ವಿಭಾಗದಲ್ಲಿದ್ದ ಡಾ. ಭಾಗ್ಯ ನಕ್ರೆಕಲಾಯ ಹಡೆ ಬಳ್ಳಿಯ ಸಂಶೋಧನಾ ಚಟುವಟಿಕೆ ಆರಂಭಿಸಿ 2017ರಲ್ಲಿ ಪೇಟೆಂಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ 2021ರಲ್ಲಿ 'ಎ ಪ್ರೊಸೆಸ್ ಫಾರ್ ಎಕ್ಸ್ ಟ್ರಾಕ್ಷನ್ ಪೇಟೆಂಟ್ ಆಂಡ್ ಪ್ಯೂರಿಫಿಕೇಶನ್ ಆಫ್ ಟೆಟ್ರಾಂಡೈನ್' ಎಂಬ ಸಂಶೋಧನಾ ಪ್ರಕ್ರಿಯೆಗೆ ಪೇಟೆಂಟ್ ಲಭಿಸಿದ್ದು, 20 ವರ್ಷಗಳ ಅವಧಿಗೆ ಪೇಟೆಂಟ್ ಪ್ರಮಾಣ ಲಭ್ಯವಾಗಲಿದೆ ಎಂದು ಪ್ರೊ.ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರೊ.ಚಂದ್ರಶೇಖರ್ ಅವರು  ಮಂಗಳೂರು ವಿಶ್ವ ವಿದ್ಯಾನಿಲಯದಿಂದ ನಿವೃತಿಯಾಗಿದ್ದು, ಯೆನಪೋಯ ವಿವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಡಾ.  ಭಾಗ್ಯ ಅವರು ಕೂಡಾ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಹಿಂದೆ ಚೀನಾದಲ್ಲೂ ಈ ರೀತಿಯ ಬೇರೆ ಬಳ್ಳಿಯ ಸಂಶೋಧನೆಯನ್ನು ಅಲ್ಲಿನ ವಿಜ್ಞಾನಿಗಳು ಮಾಡಿದ್ದರು. ಅಲ್ಲಿನ ಬಳ್ಳಿಯಲ್ಲೂ ಟೆಂಟ್ರಾಡ್ರೈನ್ ಅಂಶವನ್ನು ಪತ್ತೆ ಮಾಡಿದ್ದರು. ಇದಾದ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನ ವಿಜ್ಞಾನಿಗಳು ಈ ಟೆಂಟ್ರಾಡ್ರ ಗಿಡದ ಮೇಲೆ ಸಂಶೋಧನೆ ಮಾಡಿದ್ದಾರೆ. ಅದರಲ್ಲಿ ಕ್ಯಾನ್ಸರ್ ನಿರೋಧಕ ಚಟುವಟಿಕೆಯನ್ನು ಪರೀಕ್ಷೆ ಮಾಡಿ ಅದರಲ್ಲಿ ಸುಲಭವಾಗಿ ಬೇರೆ ಕಾಂಪ್ಲೆಕ್ಸ್ ಮಿಕ್ಚರ್ ನಿಂದ ಬೇರ್ಪಡಿಸಲು ಸಾಧ್ಯವಿದೆಯಾ ಎಂದು ಸಂಸ್ಥೆಯ ಪ್ರಯೋಗಾಲಯದಲ್ಲೇ ಪ್ಯೂರಿಟಿ ಪರೀಕ್ಷೆ ಮಾಡಿದ್ದು, ಶೇ.98 ರಷ್ಟು ಪ್ಯೂರಿಟಿ ಬರುತ್ತದೆ ಎಂದು ಪ್ರೊ.ಚಂದ್ರಶೇಖರ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಈ ಹಡೇ ಬಳ್ಳಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗದಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ಮರ, ಗಿಡವನ್ನು ಆಶ್ರಯಿಸಿ 8 ರಿಂದ 10 ಅಡಿ ಎತ್ತರದ ತನಕ ಬೆಳೆಯುತ್ತದೆ. ಗ್ರಾಮೀಣ ಭಾಗದ ಜನರು ಈ ಬಳ್ಳಿಯನ್ನು ಅರೆದು ದೇಹ ತಂಪಾಗಲು ಹಣೆಗೆ ಹಚ್ಚುತ್ತಿದ್ದರು. ನೆಗಡಿ, ಜ್ವರ, ಶೀತ ಸೇರಿದಂತೆ ಕೆಲ ರೋಗಗಳಿಗೆ ಇದನ್ನು ಹಳ್ಳಿಗಳಲ್ಲಿ ಬಳಸುತ್ತಾರೆ. ಪ್ರೊ.ಚಂದ್ರಶೇಖರ್ ಹಾಗೂ ಡಾ.ಭಾಗ್ಯ ಅವರ ಈ ಸಂಶೋಧನಾ ಪ್ರಕ್ರಿಯೆಯಿಂದಾಗಿ ಇದೀಗ ಮಂಗಳೂರು ವಿವಿಗೆ ಪ್ರಥಮ ಪೇಟೆಂಟ್ ಲಭಿಸಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News