ಸೆ.25ರಂದು ಉಡುಪಿಯಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್‌ಗೆ ಚಾಲನೆ
ಉಡುಪಿ, ಸೆ.24: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ನಾಳೆ ಉಡುಪಿ ಜಿಲ್ಲೆಯಲ್ಲಿ ನೆಹರು ಯುವ ಕೇಂದ್ರದ ವತಿಯಿಂದ ಜಿಲ್ಲೆಯಾದ್ಯಂತ 11 ಕಡೆಗಳಲ್ಲಿ ಏಕಕಾಲದಲ್ಲಿ ನಡೆಯುವ 8:30ಕ್ಕೆ ಫಿಟ್ ಇಂಡಿಯಾ ಫ್ರೀಡಂ ರನ್-2.0 ಕಾರ್ಯಕ್ರಮಕ್ಕೆ ಎಂಜಿಎಂ ಕಾಲೇಜಿನಲ್ಲಿ ಚಾಲನೆ ನೀಡಲಿದ್ದಾರೆ.
ನೆಹರು ಯುವ ಕೇಂದ್ರ, ಉಡುಪಿ ಜಿಲ್ಲಾಡಳಿತ ಹಾಗೂ ಜಿಪಂ, ಎನ್ನೆಸ್ಸೆಸ್, ಎನ್‌ಸಿಸಿ, ರೆಡ್‌ಕ್ರಾಸ್, ಭಾರತ್ ಸ್ಬೌಡ್ಸ್‌ಗೈಡ್ಸ್, ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಉಡುಪಿ ಇವರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ 8:30ಕ್ಕೆ ಎಂಜಿಎಂ ಕಾಲೇಜು ಹಾಗೂ 9:00ಕ್ಕೆ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಸಚಿವೆ ಓಟಕ್ಕೆ ಹಸಿರು ನಿಶಾನೆ ತೋರುವ ಮೂಲಕ ಫಿಟ್ ಇಂಡಿಯಾ ಫ್ರೀಡಂ ರನ್-2.0ಕ್ಕೆ ಚಾಲನೆ ಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಪಂ ಸಿಇಓ ಡಾ. ನವೀನ್ ಭಟ್ ವೈ, ನೆಹರು ಯುವ ಕೇಂದ್ರ ಸಂಘಟನೆ ರಾಜ್ಯ ನಿರ್ದೇಶಕ ಎಂ.ಎನ್ ನಟರಾಜ್, ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್‌ನ ವ್ಯವಸ್ಥಾಪಕ ಪ್ರಬಂಧಕ ರಾಮ್ ನಾಯಕ್ ಕೆ, ಪ್ರದೀಪ್ ಕುಮಾರ್ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್ ನಾಯಕ್, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಮುಂತಾದವರು ಭಾಗವಹಿಸಲಿದ್ದಾರೆ.
ಕಾರ್ಕಳದಲ್ಲಿ: ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಸೆ.25ರಂದು ಬೆಳಗ್ಗೆ 9:30ಕ್ಕೆ ಕಾರ್ಕಳದ ಅನಂತಶಯನ ದೇವಸ್ಥಾನದ ಸಮೀಪ ಹಸಿರು ನಿಶಾನೆ ತೋರುವ ಮೂಲಕ ಫಿಟ್ ಇಂಡಿಯಾ ಫ್ರೀಡಂ ರನ್-2.0ಕ್ಕೆ ಚಾಲನೆ ನೀಡಲಿದ್ದಾರೆ.