×
Ad

ಟೆಂಪೋ ಢಿಕ್ಕಿ: ರಸ್ತೆ ದಾಟಲು ನಿಂತಿದ್ದ ಮಹಿಳೆ ಮೃತ್ಯು

Update: 2021-09-24 21:09 IST

ಕೋಟ, ಸೆ.24: ಪಿಕ್‌ಅಪ್ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ರಸ್ತೆಬದಿ ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಾಸ್ತಾನ ಟೋಲ್‌ಗೇಟ್ ಬಳಿಯ ಪೆಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೆ.23ರಂದು ರಾತ್ರಿ 10ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಬೈಂದೂರು ತಾಲೂಕಿನ ಶಿರೂರು ನ್ಯೂ ಕಾಲೋನಿಯ ಹುಮ್ರಾ ಸಿರಾಜುನ್ನೀಸಾ(60) ಎಂದು ಗುರುತಿಸಲಾಗಿದೆ. ಇವರು ಮೂಡಬಿದ್ರಿಯಲ್ಲಿ ನಡೆದ ಸಂಬಂಧಿಕರ ಮದುವೆ ಕಾರ್ಯಕ್ರಮವನ್ನು ಮುಗಿಸಿ ಮಿನಿಬಸ್‌ನಲ್ಲಿ ವಾಪಾಸ್ಸು ಬರುತ್ತಿದ್ದು, ದಾರಿ ಮಧ್ಯೆ ಸಾಸ್ತಾನದಲ್ಲಿ ಟೀ ಕುಡಿಯಲು ಮಿನಿಬಸ್ ಅನ್ನು ನಿಲ್ಲಿಸಲಾಗಿತ್ತು. ಅಲ್ಲಿ ಹುಮ್ರಾ ಪೆಟ್ರೋಲ್ ಬಂಕ್‌ನ ಶೌಚಾಲಯಕ್ಕೆ ಹೋಗಲು ರಸ್ತೆ ದಾಟಿ ನಡುವಿನ ಯು ಟರ್ನ್ ಬಳಿ ನಿಂತಿದ್ದರು.

ಈ ವೇಳೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಪಿಕ್‌ಅಪ್ ವಾಹನ ಎದುರಿನಲ್ಲಿನ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ರಸ್ತೆ ದಾಟಲು ನಿಂತಿದ್ದ ಹುಮ್ರಾ ಸಿರಾಜುನ್ನೀಸಾಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು, ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಮೃತರು ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರ ಪತಿ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News