ಮೊದಲ ಬಾರಿ ಅಮೆರಿಕದ ಅಧ್ಯಕ್ಷ ಬೈಡನ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ; ದ್ವಿಪಕ್ಷೀಯ ಮಾತುಕತೆ ಆರಂಭ

Update: 2021-09-24 16:13 GMT

ವಾಷಿಂಗ್ಟನ್ ಡಿಸಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಶ್ವೇತಭವನದಲ್ಲಿ ಭೇಟಿ ಮಾಡಿದರು. ಬೈಡನ್  ಜನವರಿಯಲ್ಲಿ ಅಧ್ಯಕ್ಷರಾದ ನಂತರ ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿ ಇದಾಗಿದೆ.

ಪ್ರಧಾನಿ ಮೋದಿ ಹಾಗೂ ಬೈಡನ್ ದ್ವಿಪಕ್ಷೀಯ ಸಭೆಯ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆ ಚರ್ಚಿಸಲಿದ್ದಾರೆ. ಸಭೆಯಲ್ಲಿ ಎರಡೂ  ದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು.

“ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಧನ್ಯವಾದ ತಿಳಿಸುವೆ. ಮೊದಲು ನಮಗೆ ಚರ್ಚೆಗಳನ್ನು ನಡೆಸಲು ಅವಕಾಶವಿತ್ತು. ಆ ಸಮಯದಲ್ಲಿ ನೀವು ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳ ದೃಷ್ಟಿಕೋನವನ್ನು ರೂಪಿಸಿದ್ದೀರಿ. ಇಂದು, ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ನೀವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಗಟ್ಟಿಯಾಗಲು ಉದ್ದೇಶಿಸಲಾಗಿದೆ "ಎಂದು ಪ್ರಧಾನಿ ಮೋದಿ ಅವರು ಬೈಡನ್‌ಗೆ ಹೇಳಿದರೆಂದು ವರದಿಯಾಗಿದೆ.

ಬೈಡನ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ, ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರಿಂದ ಆಯೋಜಿಸಲಾದ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಕೂಡ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಕ್ವಾಡ್ ಶೃಂಗಸಭೆಯು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News