×
Ad

ಕರಾವಳಿ ಜಿಲ್ಲೆಗಳಲ್ಲಿನ ಮರಳಿನ ಸಮಸ್ಯೆಗೆ ತಿಂಗಳಲ್ಲಿ ಪರಿಹಾರ: ಸಚಿವ ಆಚಾರ್ ಹಾಲಪ್ಪ

Update: 2021-09-24 21:23 IST

ಬೆಂಗಳೂರು, ಸೆ. 24: `ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿನ ಮರಳಿನ ಸಮಸ್ಯೆಗೆ ಇನ್ನೂ ಒಂದು ಅಥವಾ ಒಂದೂವರೆ ತಿಂಗಳಲ್ಲಿ ಸೂಕ್ತ ಪರಿಹಾರ ಕಲ್ಪಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಆಚಾರ್ ಹಾಲಪ್ಪ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಡಾ.ಭರತ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹೊಸ ಮರಳು ನೀತಿ-2020ರಂತೆ ರಾಜ್ಯದಲ್ಲಿ ಮರಳು ಗಣಿಗಾರಿಕೆ ನಡೆಸುವ ಕುರಿತು ಉಪಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಕರಡು ನಿಯಮಗಳಿಗೆ ಅನುಮೋದನೆ ಕೋರಿ ಸಂಪುಟದ ಮುಂದೆ ಮಂಡಿಸಲು ಕ್ರಮ ವಹಿಸಲಾಗಿದೆ.

ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ ಮನೆ ನಿರ್ಮಿಸಲು ಬಳಕೆ ಮಾಡುವ `ಕೆಂಪುಕಲ್ಲು' ತೆಗೆಯುವ ಸಂಬಂಧ ನೂತನ ಕಲ್ಲು ನೀತಿ ಜಾರಿಗೊಳಿಸಲು ಸರಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ. ಆದರೂ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸ್ಪಷ್ಟಣೆ ನೀಡಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಡಾ.ಭರತ್ ಶೆಟ್ಟಿ, `ಕರಾವಳಿಯ ಎರಡು ಅಣೆಕಟ್ಟುಗಳಲ್ಲಿನ ಹೂಳನ್ನು ಸಾಂಪ್ರದಾಯಕ ರೀತಿಯಲ್ಲಿ ತೆಗೆಯಲು ಅವಕಾಶ ಕಲ್ಪಿಸಬೇಕು. ಅಲ್ಲದೆ, ಕರಾವಳಿಯಲ್ಲಿ ಮನೆ ನಿರ್ಮಿಸಲು ಬಳಸುವ ಕೆಂಪು ಕಲ್ಲು ತೆಗೆಯಲು ಮುಕ್ತ ಅವಕಾಶ ಕಲ್ಪಿಸಬೇಕು. ಗಣಿಗಾರಿಕೆ ವ್ಯಾಪ್ತಿಗೆ ಸೇರಿಸಿದರೆ ಸ್ಥಳೀಯರಿಗೆ ಸಮಸ್ಯೆಯಾಗುತ್ತದೆ. ನಿರ್ಬಂಧ ಹೇರುವುದರಿಂದ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ' ಎಂದು ಗಮನ ಸೆಳೆದರು.

ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿ(ನಾನ್ ಸಿಆರ್‍ಝಡ್) ನದಿ ಪಾತ್ರದಲ್ಲಿ ಟೆಂಡರ್ ಕಮ್ ಇ-ಹರಾಜು ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮಾಡಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಕೇವಲ ನಾಲ್ಕೈದು ಸಾವಿರ ರೂ.ಗಳಿದ್ದ ಲೋಡ್ ಮರಳಿನ ಬೆಲೆ 12ರಿಂದ 15 ಸಾವಿರ ರೂ.ಗಳಿಗೆ ಏರಿಕೆಯಾಗಲಿದೆ ಎಂದು ಡಾ.ಭರತ್ ಶೆಟ್ಟಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News