ಜಾಗತಿಕ ಆಹಾರ ವ್ಯವಸ್ಥೆಯ ವೈಫಲ್ಯ ಆತಂಕಕಾರಿ: ವಿಶ್ವಸಂಸ್ಥೆ ಶೃಂಗಸಭೆ ಎಚ್ಚರಿಕೆ

Update: 2021-09-24 17:17 GMT

ನ್ಯೂಯಾರ್ಕ್, ಸೆ.24: ಭವಿಷ್ಯದಲ್ಲಿ ಜಾಗತಿಕ ಆಹಾರ ವ್ಯವಸ್ಥೆಯ ಕುರಿತು ತುರ್ತು ಎಚ್ಚರಿಕೆ ಜಾರಿಗೊಳಿಸಿರುವ ವಿಶ್ವಸಂಸ್ಥೆ ಅಧಿಕಾರಿಗಳು ಹಾಗೂ ಜಾಗತಿಕ ಮುಖಂಡರು, ಆಹಾರ ವ್ಯವಸ್ಥೆ ಮುಂದಿನ ತಲೆಮಾರಿಗೆ ಸಂವಹನೀಯ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಉಳಿಯುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಸಂಘಟಿತರಾಗಿ ಕಾರ್ಯನಿರ್ವಹಿಸಲು ಪಣತೊಟ್ಟಿದ್ದಾರೆ ಎಂದು ವರದಿಯಾಗಿದೆ.

‌ಈಗಿನ ಆಹಾರ ವ್ಯವಸ್ಥೆ ವಿಫಲವಾಗುತ್ತಿದೆ. ಪ್ರತೀ ದಿನ ಸುಮಾರು 800 ಮಿಲಿಯನ್ಗೂ ಅಧಿಕ ಜನತೆ ಹಸಿವಿನಿಂದ ಬಳಲುತ್ತಿದ್ದಾರೆ. ಮಿಲಿಯಾಂತರ ಮಕ್ಕಳು ಉಪವಾಸ ಬೀಳುವ ಪರಿಸ್ಥಿತಿಯಿದೆ ಮತ್ತು ಉತ್ಪಾದನೆಯಾಗುವ ಆಹಾರದಲ್ಲಿ ಸುಮಾರು 3ನೇ ಒಂದು ಅಂಶದಷ್ಟು ವ್ಯರ್ಥವಾಗುತ್ತಿದೆ. ವ್ಯರ್ಥವಾಗುತ್ತಿರುವ ಆಹಾರದ ಮೌಲ್ಯ 1 ಲಕ್ಷ ಕೋಟಿ ಡಾಲರ್ಗೂ ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ಉಪಪ್ರಧಾನ ಕಾರ್ಯದರ್ಶಿ ಅಮೀನಾ ಮುಹಮ್ಮದ್ ಹೇಳಿದ್ದಾರೆ. ವಿಶ್ವಸಂಸ್ಥೆ ಜಾಗತಿಕ ಆಹಾರ ಶೃಂಗಸಭೆ 2021ರಲ್ಲಿ ಅವರು ಮಾತನಾಡುತ್ತಿದ್ದರು.

3 ಮಿಲಿಯನ್ ಜನತೆಗೆ ಆರೋಗ್ಯಕರ ಆಹಾರ ದೊರಕುತ್ತಿಲ್ಲ. ಇದೇ ವೇಳೆ 2 ಬಿಲಿಯನ್ ಜನತೆ(ಪುರುಷರು, ಮಕ್ಕಳು, ಮಹಿಳೆಯರು) ಸ್ಥೂಲಕಾಯ(ಬೊಜ್ಜು) ಹೊಂದಿದ್ದಾರೆ. ಇದೇ ವ್ಯವಸ್ಥೆ ಮುಂದುವರಿದರೆ ಆಹಾರ ಸಂಬಂಧಿತ ಆರೋಗ್ಯ ಸಮಸ್ಯೆಗೆ ಮಾಡುತ್ತಿರುವ ವೆಚ್ಚಕ್ಕೆ ಇನ್ನೂ 1 ಲಕ್ಷ ಕೋಟಿ ಡಾಲರ್ ವೆಚ್ಚ ಸೇರ್ಪಡೆಗೊಳ್ಳಲಿದೆ. ಸರಳವಾಗಿ ಹೇಳುವುದಾದರೆ ನಮ್ಮ ಆಹಾರ ವ್ಯವಸ್ಥೆ ಉದ್ದೇಶಿತ ಗುರಿ ತಲುಪಲು ವಿಫಲವಾಗಿದೆ. ಸುಸ್ಥಿರ, ಸಂವಹನೀಯ ಆಹಾರ ಉತ್ಪಾದನಾ ವ್ಯವಸ್ಥೆಯ ಮೂಲಕ ನಮ್ಮ ಭೂಮಿಯನ್ನು ರಕ್ಷಿಸುವ ಜೊತೆಗೆ ಹೆಚ್ಚುತ್ತಿರುವ ಜಾಗತಿಕ ಸಮುದಾಯಕ್ಕೆ ಆಹಾರ ಒದಗಿಸಲು ಸಾಧ್ಯವಾಗಲಿದೆ. ಆದರೆ ಒಗ್ಗೂಡಿ ಕಾರ್ಯ ನಿರ್ವಹಿದರೆ ಮಾತ್ರ ಇದು ಸಾಧ್ಯ ಎಂದವರು ಹೇಳಿದ್ದಾರೆ.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಎಲ್ ಸಿಸಿ, ಟರ್ಕಿ ಅಧ್ಯಕ್ಷ ರೆಸೆಪ್ ತಯೀಪ್ ಎರ್ಡೋಗನ್, ಅಮೆರಿಕನ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಮುಖ್ಯಸ್ಥೆ ಸಮಂತಾ ಪೊವಾರ್ ಮುಂತಾದ ವಿಶ್ವಮುಖಂಡರು ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿ, ನೂತನ ಆಹಾರ ಉತ್ಪಾದನಾ ವ್ಯವಸ್ಥೆಯ ಅಗತ್ಯವನ್ನು ಪ್ರತಿಪಾದಿಸಿದರು.

 ವಿಶ್ವದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಕೃಷಿ ಕ್ಷೇತ್ರದ ಪಾಲು 19-29% ಆಗಿರುವುದರಿಂದ, ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಆಹಾರ ಉತ್ಪಾದಿಸುವ ವ್ಯವಸ್ಥೆಗೆ ಪರ್ಯಾಯ ಹುಡುಕಬೇಕಿದೆ ಎಂದು ಈ ವರ್ಷ ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News