ಕುಡ್ಡಲೂರು ಅಂತರ್ಜಾತಿ ದಂಪತಿ ಹತ್ಯೆ ಪ್ರಕರಣ: ಓರ್ವನಿಗೆ ಮರಣದಂಡನೆ,12 ಜನರಿಗೆ ಜೀವಾವಧಿ ಶಿಕ್ಷೆ

Update: 2021-09-24 17:47 GMT

ಚೆನ್ನೈ,ಸೆ.24: ಹದಿನೆಂಟು ವರ್ಷಗಳ ಹಿಂದಿನ ಅಂತರ್ಜಾತಿ ದಂಪತಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಶುಕ್ರವಾರ ಮರಣದಂಡನೆಯನ್ನು ಘೋಷಿಸಿರುವ ಕುಡ್ಡಲೂರು ಜಿಲ್ಲಾ ಎಸ್ಸಿ/ಎಸ್ಟಿ ಪ್ರಕರಣಗಳ ವಿಶೇಷ ನ್ಯಾಯಾಲಯವು ಓರ್ವ ಹಾಲಿ ಇನ್ಸ್ಪೆಕ್ಟರ್ ಮತ್ತು ನಿವೃತ್ತ ಡಿಎಸ್ಪಿ ಸೇರಿದಂತೆ ಇತರ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ತಮಿಳುನಾಡಿನ ವಿರುಧಾಚಲಂ ಸಮೀಪದ ಕುಪ್ಪನಥಂ ನಿವಾಸಿಗಳಾದ ದಲಿತ ಸಮುದಾಯದ ಎಸ್.ಮುರುಗೇಶನ್ (25) ಮತ್ತು ವಣ್ಣಿಯಾರ್ ಸಮುದಾಯದ ಡಿ.ಕನ್ನಗಿ (22) ಅಣ್ಣಾಮಲೈ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪ್ರೀತಿಯ ಬಲೆಗೆ ಸಿಲುಕಿದ್ದರು. ಹೆತ್ತವರಿಗೆ ತಿಳಿಸದೆ ಮದುವೆಯಾಗಲು ಮೇ 2003ರಲ್ಲಿ ನಿರ್ಧರಿಸಿದ್ದರು. ಪ್ರೇಮಿಗಳು ಜೊತೆಯಾಗಿ ಪರಾರಿಯಾಗಿದ್ದು,ಆಗಿನ ವಿಲ್ಲುಪುರಂ ಜಿಲ್ಲೆಯ ಮೂಂಗಿಲ್ಥುರೈಪಟ್ಟು ಎಂಬಲ್ಲಿ ತನ್ನ ಸಂಬಂಧಿಯ ಮನೆಯಲ್ಲಿ ಕನ್ನಗಿಯನ್ನು ಉಳಿಸಿದ್ದ ಮುರುಗೇಶನ್ ಕುಡ್ಡಲೂರಿನ ವಣ್ಣಂಗುಡಿಕಾಡು ಎಂಬಲ್ಲಿ ಇನ್ನೋರ್ವ ಸಂಬಂಧಿಯ ಮನೆಯಲ್ಲಿ ತಂಗಿದ್ದ.
ಪಂಚಾಯತ್ ಅಧ್ಯಕ್ಷನಾಗಿದ್ದ ಕನ್ನಗಿಯ ತಂದೆಗೆ ಮಗಳ ಮದುವೆಯ ಸುದ್ದಿ ಗೊತ್ತಾದಾಗ ದಂಪತಿಗಾಗಿ ಶೋಧ ಆರಂಭಿಸಿದ್ದ. 2003,ಜು.8ರಂದು ಪತ್ತೆಯಾದ ದಂಪತಿಯನ್ನು ಕನ್ನಗಿಯ ಸಂಬಂಧಿಗಳು ಊರಿಗೆ ಕರೆತಂದಿದ್ದರು.

ದಂಪತಿಯನ್ನು ರುದ್ರಭೂಮಿಗೆ ಒಯ್ದಿದ್ದ ಕನ್ನಗಿಯ ಕುಟುಂಬವು ನೂರಾರು ಗ್ರಾಮಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ವಿಷವನ್ನು ಕುಡಿಸಿ ಹತ್ಯೆಗೈದು,ಬಳಿಕ ಶವಸಂಸ್ಕಾರವನ್ನು ಪ್ರತ್ಯೇಕವಾಗಿ ನಡೆಸಿತ್ತು. ಹತ್ಯೆ ಸಂಚಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಕನ್ನಗಿಯ ಸೋದರ ಮರುತ್ತುಪಾಂಡಿಗೆ ಮರಣದಂಡನೆಯನ್ನು ಘೋಷಿಸಿದ ನ್ಯಾಯಾಲಯವು ಆಕೆಯ ತಂದೆ,ಪ್ರಕರಣವನ್ನು ತಪ್ಪಾಗಿ ನಿರ್ವಹಿಸಿದ್ದ ಆಗ ಪಿಎಸ್ಐ ಆಗಿದ್ದ ಹಾಲಿ ಇನ್ಸ್ಪೆಕ್ಟರ್ ಹಾಗೂ ಆಗ ಇನ್ಸ್ಪೆಕ್ಟರ್ ಆಗಿದ್ದ ನಿವೃತ್ತ ಡಿಎಸ್ಪಿ ಸೇರಿಂದತೆ 12 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News