ಕ್ವಾಡ್ ಶೃಂಗಸಭೆ: ಭಯೋತ್ಪಾದನೆ ಬಗ್ಗೆ ಮೋದಿ- ಬೈಡೆನ್ ಚರ್ಚೆ

Update: 2021-09-25 04:20 GMT
Photo source: PTI

ವಾಷಿಂಗ್ಟನ್, ಸೆ.25: ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಪಾತ್ರ ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಪಾಕಿಸ್ತಾನ ಶಾಮೀಲಾಗಿರುವ ವಿಷಯಗಳು ಕ್ವಾಡ್ ಶೃಂಗಸಭೆಯಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ- ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ನಡುವಿನ ದ್ವಿಪಕ್ಷೀಯ ಮಾತುಕತೆಯ ವೇಳೆ ಚರ್ಚೆಗೆ ಬಂದಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ.

ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲದ ಬಗ್ಗೆ ವಾಷಿಂಗ್ಟನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಳದಾದ ಪ್ರಶ್ನೆಗೆ ಉತ್ತರಿಸಿದ ಅವರು, "ಪಾಕಿಸ್ತಾನವು ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ ಹಾಗೂ ಭಾರತ ತನ್ನ ನೆರೆಯ ದೇಶಗಳಲ್ಲಿ ಹಾಗೂ ಅದರಾಚೆ ನಿರ್ವಹಿಸುತ್ತಿರುವ ವಿಷಯಗಳಲ್ಲಿ ಸಮಸ್ಯೆ ಸೃಷ್ಟಿಸಲು ಕುಮ್ಮಕ್ಕು ನೀಡುತ್ತಿದೆ" ಎಂದು ಆಪಾದಿಸಿದರು.

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಮತ್ತು ಭಯೋತ್ಪಾದನೆ ಸಮಸ್ಯೆಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಹೆಚ್ಚು ಜಾಗರೂಕವಾಗಿ ನೋಡುವ, ಪರಿಶೀಲಿಸುವ ಮತ್ತು ಕಣ್ಗಾವಲು ಇಡುವ ಬಗ್ಗೆ ಸ್ಪಷ್ಟ ಭಾವನೆ ದ್ವಿಪಕ್ಷೀಯ ಮಾತುಕತೆ ಮತ್ತು ಕ್ವಾಡ್ ಶೃಂಗದಲ್ಲಿ ವ್ಯಕ್ತವಾಯಿತು ಎಂದು ಸ್ಪಷ್ಟಪಡಿಸಿದರು.

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಅಮೆರಿಕ ಹಾಗೂ ಭಾರತ ತೀವ್ರ ಕಳವಳ ವ್ಯಕ್ತಪಡಿಸಿವೆ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ಮಹತ್ವವನ್ನು ಉಭಯ ದೇಶಗಳು ಒತ್ತಿ ಹೇಳಿವೆ ಎಂದು ಶೃಂಗ್ಲಾ ಹೇಳಿದರು.

ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸ್ವಯಂ ಆಗಿ ಉಲ್ಲೇಖಿಸಿದ್ದಾರೆ ಜತೆಗೆ ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲಿಸುವುದನ್ನು ಸ್ಥಗಿತಗೊಳಿಸುವಂತೆ ಆ ದೇಶಕ್ಕೆ ಸೂಚಿಸಿದ್ದಾರೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶೃಂಗ್ಲಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News