ಭಾರತದ ಗಡಿಯುದ್ದಕೂ ಅಭಿವೃದ್ಧಿಗೊಳ್ಳುತ್ತಿರುವ 680 ಚೀನಿ ಗ್ರಾಮಗಳು ಆತಂಕಕ್ಕೆ ಕಾರಣವಾಗಿವೆ: ತಜ್ಞರ ಹೇಳಿಕೆ

Update: 2021-09-25 18:20 GMT

ಸಾಂದರ್ಭಿಕ ಚಿತ್ರ

ಗಾಂಧಿನಗರ ,ಸೆ.25: ಚೀನಾ ಭಾರತಕ್ಕೆ ಹೊಂದಿಕೊಂಡಿರುವ ತನ್ನ ಗಡಿಯುದ್ದಕ್ಕೂ 680 ‘ಕ್ಸಿಯೋಕಾಂಗ್ (ಸಮೃದ್ಧ ಅಥವಾ ಅಭಿವೃದ್ಧಿಗೊಳ್ಳುತ್ತಿರುವ ಗ್ರಾಮಗಳು)ಗಳನ್ನು ನಿರ್ಮಿಸಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಜಾಗತಿಕ ಭಯೋತ್ಪಾದನೆ ನಿಗ್ರಹ ಮಂಡಳಿ (ಜಿಸಿಟಿಸಿ)ಯ ಸಲಹಾ ಸಮಿತಿಯು ಬಹಿರಂಗಗೊಳಿಸಿದೆ.

ಈ ಗ್ರಾಮಗಳು ಭಾರತೀಯ ಗ್ರಾಮಸ್ಥರನ್ನು ಉತ್ತಮ ಚೀನಿ ಬದುಕಿನತ್ತ ಸೆಳೆಯುವ ಉದ್ದೇಶವನ್ನು ಹೊಂದಿವೆ ಮತ್ತು ಚೀನಿ ಸರಕಾರದ ಹೆಚ್ಚುವರಿ ಕಣ್ಣು ಮತ್ತು ಕಿವಿಗಳಾಗಿ ಕೆಲಸ ಮಾಡುತ್ತಿವೆ. ಇವು ಅವರ ಕಡೆಯಿಂದ ಗುಪ್ತಚರ,ಭದ್ರತಾ ಕಾರ್ಯಾಚರಣೆಗಳಾಗಿವೆ. ಅವರು ಜನರನ್ನು ಭಾರತ ವಿರೋಧಿಯನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಇಂತಹ ಪ್ರಯತ್ನಗಳ ಬಗ್ಗೆ ನಾವು ನಮ್ಮ ಪೊಲೀಸ್ ಸಿಬ್ಬಂದಿಗಳನ್ನು ತರಬೇತುಗೊಳಿಸುತ್ತಿದ್ದೇವೆ ಮತ್ತು ಇಂತಹ ಪ್ರಯತ್ನಗಳನ್ನು ಹೇಗೆ ಎದುರಿಸಬೇಕು ಎನ್ನುವ ಬಗ್ಗೆ ಅವರಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದು ಜಿಸಿಟಿಸಿ ಸಲಹಾ ಸಮಿತಿಯ ಸದಸ್ಯ ಕೃಷ್ಣ ವರ್ಮಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಭಾರತ ಸರಕಾರದ ಮಾಜಿ ವಿಶೇಷ ಕಾರ್ಯದರ್ಶಿಯಾಗಿರುವ ವರ್ಮಾ ಗಾಂಧಿನಗರದ ರಾಷ್ಟ್ರೀಯ ರಕ್ಷಾ ವಿವಿ(ಆರ್‌ಆರ್‌ಯು)ಯಲ್ಲಿ ಅರುಣಾಚಲ ಪ್ರದೇಶದ 16 ಪ್ರೊಬೇಷನರಿ ಡಿಎಸ್‌ಪಿಗಳಿಗೆ 12 ದಿನಗಳ ವಿಶೇಷ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಪಾಲ್ಗೊಂಡಿದ್ದರು. ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಕೋಆಪರೇಷನ್‌ನಲ್ಲಿ ಎಮಿರಿಟಸ್ ರಿಸೋರ್ಸ್ ಫ್ಯಾಕಲ್ಟಿಯಾಗಿರುವ ಅವರು ಆರ್‌ಆರ್‌ಯುದಲ್ಲಿಯೂ ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

 ‘ತಂತ್ರಜ್ಞಾನ ಕ್ಷೇತ್ರದಲ್ಲಿ,ವಿಶೇಷವಾಗಿ ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚೀನಿಯರು ಬಹಳ ಮುಂದುವರಿದಿದ್ದಾರೆ. ಭಾರತದ ಜನರನ್ನು ದಾರಿ ತಪ್ಪಿಸಲು,ಸುಳ್ಳು ಮಾಹಿತಿಗಳನ್ನು ಹರಡಲು ಅವರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಅರುಣಾಚಲ ಪ್ರದೇಶದ ಪೊಲೀಸ್ ಅಧಿಕಾರಿಗಳಿಗೆ ತರಬೇತಿಯಲ್ಲಿ ಇವನ್ನೆಲ್ಲ ನಾವು ಬೋಧಿಸಿದ್ದೇವೆ.ಈಶಾನ್ಯ ಗಡಿಪ್ರದೇಶಗಳು ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಇಂತಹ ವಿಧ್ವಂಸಕ ಪ್ರಯತ್ನಗಳ ಬಗ್ಗೆ ಅವರು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ನಮ್ಮ ಗಡಿಗಳಲ್ಲಿ ನುಸುಳುವವರು ಮ್ಯಾಂಡರಿನ್ (ಚೀನಿ ಭಾಷೆ) ಮಾತನಾಡುವುದರಿಂದ ಅದನ್ನೂ ನಾವು ಅವರಿಗೆ ಕಲಿಸುತ್ತಿದ್ದೇವೆ ’ಎಂದು ವರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News