ಬಾಧ್ಯತೆಗಳಿಗೆ ಬದ್ಧರಾಗಿರಿ: ತಾಲಿಬಾನ್‌ಗೆ ಭಾರತ, ಅಮೆರಿಕ ಆಗ್ರಹ

Update: 2021-09-25 17:51 GMT

ವಾಷಿಂಗ್ಟನ್, ಸೆ.25: ಬಾಧ್ಯತೆಗಳನ್ನು ಮರೆಯಬಾರದು ಮತ್ತು ಮಕ್ಕಳು, ಮಹಿಳೆಯರು, ಅಲ್ಪಸಂಖ್ಯಾತರ ಸಹಿತ ಎಲ್ಲಾ ಅಫ್ಗಾನೀಯರ ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಭಾರತ ಮತ್ತು ಅಮೆರಿಕಗಳು ತಾಲಿಬಾನ್ ಅನ್ನು ಆಗ್ರಹಿಸಿವೆ. ಯುದ್ಧದಿಂದ ಜರ್ಝರಿತವಾಗಿರುವ ಅಫ್ಗಾನ್ ದೇಶವನ್ನು ಇತರ ದೇಶಗಳ ಮೇಲೆ ಬೆದರಿಕೆ ಒಡ್ಡಲು, ಉಗ್ರರಿಗೆ ಆಶ್ರಯ ಅಥವಾ ತರಬೇತಿ ನೀಡಲು ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವು ಸಂಗ್ರಹಿಸಲು ಮತ್ತೊಮ್ಮೆ ಬಳಸಲು ಆಸ್ಪದ ನೀಡುವುದಿಲ್ಲ ಎಂಬುದನ್ನು ತಾಲಿಬಾನ್ ಖಾತರಿಗೊಳಿಸಬೇಕು ಎಂದು ಭಾರತ-ಅಮೆರಿಕ ಮುಖಂಡರ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಪ್ರಪ್ರಥಮ ಮುಖಾಮುಖಿ ಸಭೆಯ ಸಂದರ್ಭ ಅಫ್ಗಾನ್‌ನಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಲು ಹೆಚ್ಚಿನ ಪ್ರಾಮುಖ್ಯ ನೀಡಲು ನಿರ್ಧರಿಸಲಾಗಿದೆ. ವಿಶ್ವಸಂಸ್ಥೆಯ 2593ನೇ ನಿರ್ಣಯಕ್ಕೆ ( ದೇಶವನ್ನು ಇತರ ದೇಶಗಳ ಮೇಲೆ ಬೆದರಿಕೆ ಒಡ್ಡಲು, ಉಗ್ರರಿಗೆ ಆಶ್ರಯ ಅಥವಾ ತರಬೇತಿ ನೀಡಲು ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವು ಸಂಗ್ರಹಿಸಲು ಮತ್ತೊಮ್ಮೆ ಬಳಸಲು ಆಸ್ಪದ ನೀಡುವುದಿಲ್ಲ ಎಂಬುದನ್ನು ಖಾತರಿಗೊಳಿಸುವುದು) ತಾಲಿಬಾನ್ ಬದ್ಧರಾಗಿರಬೇಕು . ಅಫ್ಗಾನ್‌ನಿಂದ ಹೊರಹೋಗ ಬಯಸುವವರಿಗೆ ಸುರಕ್ಷಿತ ಪ್ರಯಾಣವನ್ನು ಖಾತರಿಗೊಳಿಸಬೇಕು ಎಂದು ಉಭಯ ಮುಖಂಡರು ಆಗ್ರಹಿಸಿದರು. ಭಾರತದ ಅಧ್ಯಕ್ಷತೆಯಲ್ಲಿ ಆಗಸ್ಟ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಅನುಮೋದಿಸಲಾಗಿದೆ.

ಮರಣದಂಡನೆ ಶಿಕ್ಷೆ ಜಾರಿ ನಿರ್ಧಾರಕ್ಕೆ ಅಮೆರಿಕ ಖಂಡನೆ

ಮರಣದಂಡನೆ, ಅಂಗಛೇದನವನ್ನು ಶಿಕ್ಷೆಯ ವಿಧಾನವಾಗಿ ಮರು ಜಾರಿಗೊಳಿಸುವ ತಾಲಿಬಾನ್‌ಗಳ ಯೋಜನೆಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ.

ಅಮೆರಿಕವು ಅಫ್ಗಾನ್‌ನ ಜನತೆಯ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದವರ ಬೆಂಬಲಕ್ಕೆ ನಿಲ್ಲಲಿದೆ ಎಂದಿರುವ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, ತಾಲಿಬಾನ್‌ಗಳು ತಕ್ಷಣವೇ ಇಂತಹ ಕ್ರೂರ ಶಿಕ್ಷಾ ಪದ್ಧತಿಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಇಂತಹ ಕೃತ್ಯಗಳು ಮಾನವಹಕ್ಕುಗಳ ಸಾರಾಸಗಟು ಉಲ್ಲಂಘನೆಯಾಗಿದೆ ಮತ್ತು ಇಂತಹ ಯಾವುದೇ ಕೃತ್ಯದ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂಬ ಅಂತರಾಷ್ಟ್ರೀಯ ಸಮುದಾಯದ ಆಗ್ರಹಕ್ಕೆ ನಮ್ಮ ಬೆಂಬಲವಿದೆ ಎಂದವರು ಹೇಳಿದ್ದಾರೆ.

ಅಂತರಾಷ್ಟ್ರೀಯ ಸಮುದಾಯ ತಾಲಿಬಾನ್‌ಗಳನ್ನು ನಿಕಟವಾಗಿ ಗಮನಿಸುತ್ತಿದೆ. ಮಾನವಹಕ್ಕುಗಳನ್ನು ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಗೌರವಿಸುವ ಅಗತ್ಯವನ್ನು ಅಫ್ಗಾನ್‌ನ ಸರಕಾರಕ್ಕೆ ನಿರಂತರವಾಗಿ ಒತ್ತಿಹೇಳುತ್ತಿದ್ದೇವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News