ಹಿತಾಸಕ್ತಿಗೆ ಧಕ್ಕೆಯಾದರೆ ಅಮೆರಿಕದೊಂದಿಗಿನ ಸಂಬಂಧದ ಬಗ್ಗೆಯೂ ಯೋಚಿಸುವುದಿಲ್ಲ: ಕ್ವಾಡ್ ಬಗ್ಗೆ ಚೀನಾದ ಎಚ್ಚರಿಕೆ

Update: 2021-09-25 18:00 GMT

ಬೀಜಿಂಗ್, ಸೆ.25: ಚೀನಾದ ಪ್ರಗತಿಯನ್ನು ನಿರ್ಬಂಧಿಸಲು ಅಮೆರಿಕ ಕಾರ್ಯನಿರ್ವಹಿಸುತ್ತಿದೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಪತ್ರಿಕೆಯಲ್ಲಿ ಆರೋಪಿಸಲಾಗಿದ್ದು ಚೀನಾವನ್ನು ವಿರೋಧಿಸುವ ಅಮೆರಿಕವನ್ನು ನಿಕಟವಾಗಿ ಅನುಸರಿಸುವ ದೇಶಗಳನ್ನು ಶಿಕ್ಷಿಸಲು ತಾನು ಹಿಂಜರಿಯುವುದಿಲ್ಲ ಎಂದು ಕ್ವಾಡ್ ದೇಶಗಳಿಗೆ ಎಚ್ಚರಿಸಲಾಗಿದೆ.

ಅಮೆರಿಕವು ಕ್ವಾಡ್ ಮತ್ತು ಆಕುಸ್‌ಗಳನ್ನು ಚೀನಾವನ್ನು ನಿಯಂತ್ರಿಸುವ ಕುಟಿಲ ಉದ್ದೇಶದ ತಂಡಗಳನ್ನಾಗಿ ಪರಿವರ್ತಿಸಲು ಬಯಸಿದೆ. ಒಂದೆಡೆ ಚೀನಾ ವಿರೋಧಿ ಸಹಕಾರ ಸಂಘಟನೆ ಕ್ವಾಡ್ ಅನ್ನು ಬಲಗೊಳಿಸುವ ಜತೆಗೆ, ಕ್ರಮೇಣ ಈ ಗ್ಯಾಂಗ್‌ಗೆ ಸೇರಿಕೊಳ್ಳುವಂತೆ ಈ ಪ್ರದೇಶದ ಇತರ ದೇಶಗಳ ಮನವೊಲಿಸಲು ಯತ್ನಿಸಲಿದೆ. ಅಮೆರಿಕದ ಮಾತು ನಂಬಿ ಮೂರ್ಖರಾಗಬೇಡಿ ಮತ್ತು ಚೀನಾದ ವಿರುದ್ಧ ಪ್ರಾದೇಶಿಕ ದಾಳಗಳಾಗಿ ತಮ್ಮನ್ನು ಬಳಸುವ ಅಮೆರಿಕದ ಜಾಲಕ್ಕೆ ಬಲಿಯಾಗದಿರಿ ಎಂದು ಇತರ ಪ್ರಾದೇಶಿಕ ದೇಶಗಳಿಗೆ ಮನವಿ ಮಾಡಲಾಗುವುದು ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

ಚೀನಾವನ್ನು ವಿರೋಧಿಸುವ ಅಮೆರಿಕದ ನಿಲುವನ್ನು ನಿಕಟವಾಗಿ ಅನುಸರಿಸಬೇಡಿ ಎಂದು ಕ್ವಾಡ್ ಸದಸ್ಯದೇಶಗಳಾದ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಎಚ್ಚಿರಿಸುವ ಚೀನಾ, ಚೀನಾದ ಹಿತಾಸಕ್ತಿಗೆ ಸಂಬಂಧಿಸಿದ ಕೆಂಪುಗೆರೆಯನ್ನು ಈ ದೇಶಗಳು ದಾಟಿದರೆ, ಅಮೆರಿಕದೊಂದಿಗಿನ ಸಂಬಂಧಕ್ಕೆ ಲಕ್ಷ್ಯಕೊಡದೆ ಇವುಗಳನ್ನು ಶಿಕ್ಷಿಸಲು ನಾವು ಹಿಂಜರಿಯುವುದಿಲ್ಲ ಎಂದು ಸಂಪಾದಕೀಯ ಬರಹದಲ್ಲಿ ಎಚ್ಚರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News