ಅ. 7ರಿಂದ ಮಂಗಳೂರು ದಸರಾ ಮಹೋತ್ಸವ

Update: 2021-09-26 11:01 GMT

ಮಂಗಳೂರು, ಸೆ.26: ಶ್ರೀ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವವನ್ನು ಸರಕಾರದ ಮಾರ್ಗಸೂಚಿಯಂತೆ ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕೆ ಪೂರಕ ಸಿದ್ಧತೆಗಳು ನಡೆಯುತ್ತಿದೆ ಎಂದು ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ತಿಳಿಸಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ರವಿವಾರ ನಡೆದ ದಸರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅ.7ರಿಂದ ಅ.16ರವರೆಗೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಈ ಬಾರಿಯ ಮಹೋತ್ಸವವೂ ಯಶಸ್ವಿಯಾಗಿ ನಡೆಯಬೇಕಾದರೆ ಸಂಘಸಂಸ್ಥೆಗಳು, ಭಕ್ತರು, ಸರ್ವರ ಸಹಕಾರ ಪ್ರಮುಖವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ನಗರದ ರಾಜಬೀದಿಗಳು ವಿದ್ಯುದ್ದೀಪಗಳಿಂದ ಕಂಗೊಳಿಸಲಿವೆ ಎಂದರು.

ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ ಮಾತನಾಡಿ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಆಶಯದಂತೆ ಮಂಗಳೂರ ದಸರಾ ಮಹೋತ್ಸವ ನಡೆಯಲಿದ್ದು, ಇದು ಯಶಸ್ವಿಯಾಗಿ ನಡೆಯಬೇಕಾದರೆ ಎಲ್ಲ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.

ಸಭೆಯಲ್ಲಿ ಕುದ್ರೋಳಿ ದೇವಸ್ಥಾನದ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಜಗದೀಶ್ ಡಿ. ಸುವರ್ಣ, ಶೇಖರ್ ಪೂಜಾರಿ, ಕುದ್ರೋಳಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ. ಅನಸೂಯ, ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ರಾಧಾಕೃಷ್ಣ ಕೆ., ಶೈಲೇಂದ್ರ ಸುವರ್ಣ, ಚಿತ್ತರಂಜನ್ ಗರೋಡಿ, ಸೂರ್ಯ ಜಯ ಸಿ. ಸುವರ್ಣ, ವೇದಕುಮಾರ್ ಬೆಂಗಳೂರು, ಲೀಲಾಕ್ಷ ಕರ್ಕೇರಾ ಉಪಸ್ಥಿತರಿದ್ದರು.

''ಕಳೆದ ಬಾರಿಯೂ ‘ನಮ್ಮ ದಸರಾ-ನಮ್ಮ ಸುರಕ್ಷೆ’ ಚಿಂತನೆಯೊಂದಿಗೆ ಯಶಸ್ವಿಯಾಗಿ ನಡೆಸಲಾಗಿದೆ. ದಸರಾ ಮಹೋತ್ಸವದ ದರ್ಬಾರು ಮಂಟಪ, ಮೂರ್ತಿ ರಚನೆ ಕಾರ್ಯ ನಡೆಯುತ್ತಿದೆ. ಕಳೆದ ಬಾರಿಯೂ ಮಂಗಳೂರು ದಸರಾ ಮಹೋತ್ಸವ ಮೂಲಕ ಕರಾವಳಿಯ ಆರ್ಥಿಕ ಚೈತನ್ಯಕ್ಕೆ ಪುನಶ್ಚೇತನ ಸಿಕ್ಕಂತಾಗಿದೆ. ಇದಕ್ಕೆ ಗೋಕರ್ಣನಾಥ, ಶಾರದೆ, ನವದುರ್ಗೆಯರ ಅನುಗ್ರಹ ಕಾರಣ. ಎಲ್ಲರ ಸಹಕಾರದೊಂದಿಗೆ ಈ ಬಾರಿಯೂ ಉತ್ಸವ ಯಶಸ್ವಿಯಾಗಿ ನಡೆಯಲಿದೆ''.

-ಪದ್ಮರಾಜ್ ಆರ್., ಕೋಶಾಧಿಕಾರಿ ಕುದ್ರೋಳಿ ಕ್ಷೇತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News