ತಿಂಗಳೊಳಗೆ ಗ್ರಾಪಂ ಸದಸ್ಯರ ಗೌರವಧನ ಹೆಚ್ಚಳ ಆದೇಶ: ಸಚಿವ ಕೋಟ

Update: 2021-09-26 12:01 GMT

ಉಡುಪಿ, ಸೆ.26: ಗ್ರಾಮ ಪಂಚಾಯತ್ ಸದಸ್ಯರುಗಳ ಗೌರವಧನವನ್ನು ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಮುಂದಿನ ಒಂದೂವರೆ ತಿಂಗಳ ಒಳಗೆ ಈ ಬಗ್ಗೆ ಆದೇಶ ಹೊರಡಿಸಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ಆಶ್ರಯದಲ್ಲಿ ರವಿವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಪಂಚಾಯತ್‌ರಾಜ್ ಪ್ರಶಿಕ್ಷಣ ವರ್ಗದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಗ್ರಾಪಂ ಸದಸ್ಯರುಗಳ ಗೌರವಧನ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿವೆ. 2008ರವರೆಗೆ ಕೇವಲ 20ರೂ. ಇದ್ದ ಗೌರವಧನ ವನ್ನು ಆಗಿನ ಯಡಿಯೂರಪ್ಪ ಸರಕಾರ 250ರೂ.ಗೆ ಏರಿಕೆ ಮಾಡಿದೆ. ಸದ್ಯ ಸದಸ್ಯರ ಗೌರವಧನ 1000ರೂ. ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಗೌರವ ಧನ 2000ರೂ. ಇದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲೂ ಯುವ ಜನತೆ ಇಂದು ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಆದುದರಿಂದ ಮಾದಕ ದ್ರವ್ಯ ಮುಕ್ತ ಗ್ರಾಮ ಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಬಾಯಿಸುವಲ್ಲಿ ಗ್ರಾಪಂಗಳ ಕಾರ್ಯ ಪಡೆಯೇ ಮುಖ್ಯ ಕಾರಣವಾಗಿದೆ. ಅಸ್ಪಶ್ಯತೆ ರಹಿತ ಗ್ರಾಪಂಗಳನ್ನು ಮಾಡುವ ನಿಟ್ಟಿನಲ್ಲಿ ಅಲ್ಲಿನ ಆಡಳಿತ ಯೋಚನೆ ಮಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಂಚಾಯತ್‌ರಾಜ್ ಪ್ರಕೋಷ್ಠದ ರಾಜ್ಯ ಸಹಸಂಚಾಲಕ ರಾಮಸ್ವಾಮಿ, ರಾಜ್ಯ ಸದಸ್ಯ ಸಾಣೂರು ನರಸಿಂಹ ಕಾಮತ್, ಜಿಲ್ಲಾ ಸಂಯೋಜಕ ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಸಂಚಾಲಕ ರಾಜೀವ ಕುಲಾಲ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News