ಕೊರೋನೋತ್ತರ ಘಟ್ಟದಲ್ಲಿ ಚಿಗುರಿದ ಪ್ರವಾಸೋದ್ಯಮ: ಮಂಗಳೂರಿಗೆ ಆಗಮಿಸಿದ ಪ್ರವಾಸಿಗರು
ಮಂಗಳೂರು, ಸೆ.26: ಸುಮಾರು ಒಂದೂವರೆ ವರ್ಷದಿಂದ ಕೋವಿಡ್-ಲಾಕ್‌ಡೌನ್ ಆತಂಕದ ನಂತರ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೊಟೇಲು, ರೆಸಾರ್ಟ್, ಪ್ರವಾಸಿ ತಾಣಗಳು ಪ್ರವಾಸಿಗರಿಗೆ ತೆರೆದುಕೊಂಡಿದ್ದು, ಜನರು ಮತ್ತೆ ಹಿಂದಿನ ರೀತಿಯಲ್ಲೇ ಓಡಾಡಲು ಆರಂಭಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪುಣೆಯ ಕುಟುಂಬವೊಂದು ಖಾಸಗಿ ಜೆಟ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದು, ಇಲ್ಲಿನ ದೇವಸ್ಥಾನ, ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕಿದೆ.
ಪುಣೆಯಿಂದ ಬಂದ 16 ಮಂದಿಯಿದ್ದ ಕುಟುಂಬ ಸದಸ್ಯರನ್ನು ಕರೆತಂದ ಜೆಟ್ ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ನಂತರ, ಅಲ್ಲಿಂದ ಬೇರೆ ವಾಹನಗಳನ್ನು ಬುಕ್ ಮಾಡಿದ್ದು, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಪುಣ್ಯಕ್ಷೇತ್ರಗಳು ಮತ್ತು ಪ್ರವಾಸಿ ತಾಣಗಳಿಗೆ ತೆರಳಲಿದ್ದಾರೆ. ಸೋಮವಾರ ಈ ತಂಡವು ರಸ್ತೆ ಮಾರ್ಗದಲ್ಲೇ ಮಡಿಕೇರಿಗೆ ತೆರಳಲಿದ್ದು, ಅಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆ ನಡೆಸಲಿದೆ.
ಜೆಟ್ ವಿಮಾನದಲ್ಲಿ ಬಂದ ತಂಡವನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮತ್ತು ರೆಡ್ ಕ್ರಾಸ್ ಸದಸ್ಯರು ಸ್ವಾಗತಿಸಿದ್ದಾರೆ. ಪಣಂಬೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸಿಇಒ ಯತೀಶ್ ಬೈಕಂಪಾಡಿ, ಪ್ರವಾಸಿಗರನ್ನು ಸ್ವಾಗತಿಸಿದ್ದು, ವಿವಿಧ ಕಡೆಗಳಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾರೆ.
ಖಾಸಗಿ ಜೆಟ್ ವಿಮಾನದಲ್ಲಿ ಪ್ರವಾಸಿಗರು ಬರುವುದು ಇದೇ ಮೊದಲಲ್ಲ. ಶ್ರೀಮಂತ ಕುಟುಂಬಸ್ಥರು ವಿಮಾನವನ್ನೇ ಬುಕ್ ಮಾಡಿಕೊಂಡು ಬರುವುದು ಹಿಂದಿನಿಂದಲೂ ಇದೆ. ಈಗ ಕಳೆದ ಎರಡು ವರ್ಷಗಳಲ್ಲಿ ಪೂರ್ತಿ ಬಂದ್ ಆಗಿತ್ತು. ಈಗ ಪ್ರವಾಸೋದ್ಯಮ ಮತ್ತೆ ತೆರೆದುಕೊಳ್ಳುತ್ತಿದ್ದು, ಪ್ರವಾಸಿಗರು ಕೂಡ ಹಿಂದಿನ ರೀತಿಯಲ್ಲೇ ಓಡಾಟಕ್ಕೆ ಶುರು ಮಾಡಿದ್ದಾರೆ. ಬಂದ್ ಆಗಿದ್ದ ಪ್ರವಾಸೋದ್ಯಮ ಮತ್ತೆ ಚಿಗುರುತ್ತಿದೆ ಎಂದು ಯತೀಶ್ ಬೈಕಂಪಾಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.