×
Ad

ಯಕ್ಷಗಾನ ಕಲಿಕೆಯ ಪಾಠವಾಗಿ ಆಳವಡಿಕೆ ಅಗತ್ಯ: ಪ್ರೊ.ಎಡಪಾಡಿತ್ತಾಯ

Update: 2021-09-26 19:22 IST

ಉಡುಪಿ, ಸೆ. 26: ಯಕ್ಷಗಾನ ಕಲೆಯು ಇಂದು ಶೈಕ್ಷಣಿಕ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಅದು ಕಲಿಕೆಯ ಒಂದು ಪಾಠವಾಗಿ ಆಳವಡಿಕೆ ಆಗಬೇಕು. ಇದಕ್ಕಾಗಿ ಯಕ್ಷಗಾನ ವಿದ್ವಾಂಸರು ಹಾಗೂ ಸಂಘಟನೆಗಳು ಸಕ್ರಿಯ ವಾಗಿ ಕೆಲಸ ಮಾಡಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಎಡಪಾಡಿತ್ತಾಯ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ರವಿವಾರ ರಾಜಾಂಗಣ ದಲ್ಲಿ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಯಕ್ಷಗಾನ ವಿಶೇಷ ಪ್ರಶಸ್ತಿಯನ್ನು ತೆಂಕತಿಟ್ಟು ಯಕ್ಷಗಾನದ ನಾಟ್ಯಾಚಾರ್ಯ ಕರ್ಗಲ್ಲು ವಿಶ್ವೇಶ್ವರ ಭಟ್, ಮಟ್ಟಿ ಮುರಲೀಧರ್ ರಾವ್ ತಾಳಮದ್ದಲೆ ಅರ್ಥಧಾರಿ ಪ್ರಶಸ್ತಿಯನ್ನು ತಾಳಮದ್ದಲೆ ಅರ್ಥಧಾರಿ ವಾಸುದೇವ ರಾವ್ ಸುರತ್ಕಲ್, ಪೆರ್ಲ ಪಂಡಿತ ಕೃಷ್ಣ ಭಟ್ ತಾಳಮದ್ದಲೆ ಅರ್ಥಧಾರಿ ಪ್ರಶಸ್ತಿಯನ್ನು ತಾಳಮದ್ದಲೆ ಅರ್ಥಧಾರಿ ಉಮಾಕಾಂತ ಭಟ್ಟ ಕೆರೇಕೈ ಪ್ರದಾನ ಮಾಡಲಾಯಿತು.

ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಹೆಗಡೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಕರ್ಗಲ್ಲು ವಿಶ್ವೇಶ್ವರ ಭಟ್ಟರ ನಾಟ್ಯ ಪ್ರಾತ್ಯಕ್ಷಿಕೆ ಹಾಗೂ ‘ಕನಸ ಕಂಡನು ಕಂಸ’ ತಾಳಮದ್ದಲೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News