ತೈವಾನ್-ಚೀನಾ ಸಂಬಂಧ ಹಳಸುತ್ತಿದೆ: ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಎಚ್ಚರಿಕೆ

Update: 2021-09-26 16:51 GMT

ಬೀಜಿಂಗ್, ಸೆ.26: ತೈವಾನ್ ಮತ್ತು ಚೀನಾದ ನಡುವಿನ ಸಂಬಂಧ ಅಹಿತಕರವಾಗಿದ್ದು ಅಲ್ಲಿನ ಪ್ರಮುಖ ವಿಪಕ್ಷವು ದೇಶದ ಏಕೀಕರಣಕ್ಕೆ ನೆರವಾಗಬೇಕು ಎಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ರವಿವಾರ ಎಚ್ಚರಿಕೆ ನೀಡಿದ್ದಾರೆ. ತೈವಾನ್‌ನಲ್ಲಿ ಈಗಿರುವ ಪರಿಸ್ಥಿತಿ ಅತ್ಯಂತ ಅಹಿತಕರ ಮತ್ತು ಸಂಕೀರ್ಣ ಪರಿಸ್ಥಿತಿಯಿದ್ದು ಇಲ್ಲಿನ ಎಲ್ಲಾ ಪಕ್ಷಗಳೂ ಶಾಂತಿಯನ್ನು ಬಯಸಿ ದೇಶದ ಏಕೀಕರಣದಲ್ಲಿ ಕೈಜೋಡಿಸಬೇಕು ಎಂದು ಕ್ಸಿ ಜಿಂಪಿಂಗ್ ತೈವಾನ್‌ನ ಕೆಎಂಟಿ ಪಕ್ಷದ ನಾಯಕನಾಗಿ ಆಯ್ಕೆಗೊಂಡಿರುವ ಎರಿಕ್ ಚು ರನ್ನು ಅಭಿನಂದಿಸಿ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ. ಚು ಅವರ ಕೆಎಂಟಿ ಪಕ್ಷ ಚೀನಾದ ಪರವಾಗಿದೆ.

‌ಸ್ವಯಂ ಆಡಳಿತದ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ತೈವಾನ್ ತನ್ನ ಅಧೀನಕ್ಕೆ ಸೇರಿದ ಪ್ರದೇಶ ಎಂದು ಪ್ರತಿಪಾದಿಸುತ್ತಿರುವ ಚೀನಾ ಅಗತ್ಯಬಿದ್ದರೆ ಬಲಪ್ರಯೋಗಿಸಿಯಾದರೂ ತೈವಾನ್ ಅನ್ನು ಚೀನಾದೊಳಗೆ ಸೇರಿಸುವುದಾಗಿ ಘೋಷಿಸಿದೆ. ಮಾವೊ ಝೆಡಾಂಗ್ ಬಳಿಕದ ಅತ್ಯಂತ ಯುದ್ಧಪ್ರಿಯ ಮುಖಂಡ ಎಂದು ಪರಿಗಣಿಸಲ್ಪಟ್ಟಿರುವ ಕ್ಸಿಜಿಂಪಿಂಗ್, ತೈವಾನ್ ಅನ್ನು ವಶಕ್ಕೆ ಪಡೆಯುವುದು ಅನಿವಾರ್ಯವಾಗಿದೆ ಎಂದು ಘೋಷಿಸಿದ್ದಾರೆ.
ಚೀನಾದ ಕಮ್ಯುನಿಸ್ಟ್ ಪಕ್ಷ ಮತ್ತು ಕೆಎಂಟಿ ಪಕ್ಷಗಳು ಸಮಾನ ರಾಜಕೀಯ ನಿಲುವು ಹೊಂದಿವೆ. ಈ ಹಿಂದೆಯೂ ಎರಡೂ ಪಕ್ಷಗಳು, ತೈವಾನ್‌ನ ಸ್ವಾತಂತ್ರ್ಯವನ್ನು ವಿರೋಧಿಸುವ 1992ರ ಜನಾಭಿಪ್ರಾಯದ ಬಗ್ಗೆ ಸಹಮತ ಹೊಂದಿದ್ದವು ಎಂದು ತ್ರದಲ್ಲಿ ಕ್ಸಿಜಿಂಪಿಂಗ್ ಉಲ್ಲೇಖಿಸಿದ್ದಾರೆ.

ಆದರೆ ಈಗ ತೈವಾನ್‌ನ ಪರಿಸ್ಥಿತಿ ಅಹಿತಕರ ಮತ್ತು ಅತ್ಯಂತ ಸಂಕೀರ್ಣವಾಗಿದೆ. ತೈವಾನ್‌ನ ಎಲ್ಲಾ ಪಕ್ಷಗಳೂ ದೇಶದ ಏಕೀಕರಣ ಪ್ರಕ್ರಿಯೆಯಲ್ಲಿ ಸಹಮತ ಸೂಚಿಸಬೇಕು ಎಂದವರು ಆಗ್ರಹಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಚು, ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಗೆ ಪ್ರೋನೀಡುವ ನಿಟ್ಟಿನಲ್ಲಿ ಎರಡೂ ಪಕ್ಷಗಳು ಪರಸ್ಪರರ ಅಭಿಪ್ರಾಯ ಭೇದಗಳನ್ನು ಗೌರವಿಸಬೇಕಾಗಿದೆ ಎಂದಿದ್ದಾರೆ.

ಕೆಎಂಟಿ ಪಕ್ಷದ ಮುಖಂಡ ಮಾ ಯಿಂಗ್ ಜಿಯು 2008-2016ರವರೆಗೆ ತೈವಾನ್ ಅಧ್ಯಕ್ಷರಾಗಿದ್ದ ಸಂದರ್ಭ ಅವರು ಮತ್ತು ಚೀನಾ ಅಧ್ಯಕ್ಷ ಜಿಂಪಿಂಗ್ ಮಧ್ಯೆ 2015ರಲ್ಲಿ ಸಿಂಗಾಪುರದಲ್ಲಿ ನಡೆದಿದ್ದ ಸಭೆಯಲ್ಲಿ 1992ರ ಜನಾಭಿಪ್ರಾಯ ಎಂದು ಹೇಳಲಾಗಿರುವ ‘ಒಂದೇ ಚೀನಾ’ ಎಂಬ ಒಪ್ಪಂದವನ್ನು ಬೆಂಬಲಿಸುವುದಾಗಿ ಜಿಯು ಭರವಸೆ ನೀಡಿದ್ದರು. ಆದರೆ 2016ರಲ್ಲಿ ತ್ಸಾಯ್ ಇಂಗ್‌ವೆನ್ ತೈವಾನ್ ಅಧ್ಯಕ್ಷರಾದ ಬಳಿಕ ಅವರ ಪಕ್ಷ ತೈವಾನ್ ಸಾರ್ವಭೌಮ ದೇಶವಾಗಿದ್ದು ಒಂದೇ ಚೀನಾದ ಭಾಗವಾಗಿಲ್ಲ ಎಂದು ಘೋಷಿಸಿದೆ. ಅಂದಿನಿಂದ ತೈವಾನ್ ಮೇಲೆ ಸೇನೆ, ರಾಜತಾಂತ್ರಿಕ ಮತ್ತು ಆರ್ಥಿಕ ಕ್ರಮಗಳ ಮೂಲಕ ಚೀನಾ ನಿರಂತರ ಒತ್ತಡ ಹೇರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News