ಮಂಗಳೂರಿನಲ್ಲಿ 5 ದಿನಗಳ ಕಾಲ ವಾಹನಗಳ ವಿಶೇಷ ತಪಾಸಣೆ: ಕಮಿಷನರ್ ಶಶಿಕುಮಾರ್
Update: 2021-09-27 13:15 IST
ಮಂಗಳೂರು, ಸೆ. 27: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೋಮವಾರದಿಂದ ಅಕ್ಟೋಬರ್ 2ರ ಶನಿವಾರದವರೆಗೆ ವಿಶೇಷ ವಾಹನ ತಪಾಸಣೆ ನಡೆಯಲಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ವಾಹನಗಳ ಗಾಜುಗಳಿಗೆ ನಿಷೇಧಿತ ಕಪ್ಪು ಪಟ್ಟಿ ಅಳವಡಿಸಿರುವುದು, ನಂಬರ್ ಪ್ಲೇಟ್ (ನೋಂದಣಿ ಸಂಖ್ಯೆ) ಸರಿಯಾಗಿ ಅಳವಡಿಸದಿರುವುದು, ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿರುವುದು, ಇನ್ಸೂರೆನ್ಸ್ (ವಿಮೆ) ನವೀಕರಿಸದಿರುವುದು, ಹಳೆಯ ಪ್ರಕರಣಗಳನ್ನು ಬಾಕಿಯಿಟ್ಟಿರುವುದು, ಹೊಗೆ ತಪಾಸಣೆ ಮಾಡಿಸದಿರುವ ಬಗ್ಗೆ ವಿಶೇಷ ತಪಾಸಣೆ ಮಾಡಲು ಸೂಚಿಸಲಾಗಿದೆ.
ಪ್ರತಿಯೊಂದು ದಿನ ಒಂದೊಂದು ವಿಷಯದ ಮೇಲೆ ಕೇಂದ್ರೀಕರಿಸಿ ತಪಾಸಣೆ ಮಾಡಬೇಕು ಮತ್ತು ಆಯಾ ದಿನದ ಕಾರ್ಯಾಚರಣೆಯ ಮಾಹಿತಿಯನ್ನು ಸಂಜೆ 7 ಗಂಟೆಯೊಳಗೆ ಕಮಿಷನರೇಟ್ ಕಚೇರಿಗೆ ನೀಡಬೇಕು ಎಂದು ಕಮಿಷನರ್ ಶಶಿಕುಮಾರ್ ಸೂಚಿಸಿದ್ದಾರೆ.