ಸರ್ವ ಕ್ಷೇತ್ರಗಳಿಗೂ ಪೂರಕವಾದ ಪ್ರವಾಸೋದ್ಯಮಕ್ಕೆ ಆದ್ಯತೆ: ಸಚಿವ ಅಂಗಾರ

Update: 2021-09-27 09:39 GMT

ಮಂಗಳೂರು, ಸೆ.27: ಅಭಿವೃದ್ಧಿಗೆ ಪೂರಕವಾದ ವಿಫುಲ ಅವಕಾಶಗಳ ಹೊರತಾಗಿಯೂ ದ.ಕ. ಜಿಲ್ಲೆ ಪ್ರವಾಸೋದ್ಯಮದಲ್ಲಿ ನಿರೀಕ್ಷಿತ ಅಭಿವೃದ್ದಿಯನ್ನು ಕಂಡಿಲ್ಲ. ಇದಕ್ಕಾಗಿ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಪೂರಕವಾದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಅಂಗಾರ ಅವರು ಅಭಿಪ್ರಾಯಿಸಿದ್ದಾರೆ.

ನಗರದ ಓಷಿಯನ್ ಪರ್ಲ್ ಹೊಟೇಲ್‌ನಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಹಮ್ಮಿಕೊಳ್ಳಲಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅಭಿವೃದ್ಧಿಯ ನಿಟ್ಟಿನಲ್ಲಿ ಸ್ಪಷ್ಟವಾದ ಕಲ್ಪನೆಯ ಅಗತ್ಯವಿದ್ದು, ಅದಕ್ಕೆ ಪೂರಕವಾಗಿ ಸರಕಾರ ಯೋಜನೆಗಳನ್ನು ರೂಪಿಸಲಿದೆ. ಇದರ ಜತೆಗೆ ಉದ್ಯಮಗಳಿಗೆ ಪೂರಕವಾಗಿ ಸರಕಾರದ ಕೆಲವೊಂದು ನೀತಿಗಳನ್ನು ಸರಳೀಕರಿಸುವ ಕಾರ್ಯವೂ ಆಡಳಿತ ವರ್ಗದಿಂದ ಆಗಬೇಕಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, 320 ಕಿ.ಮೀ. ಉದ್ದದ ಕರಾವಳಿಯನ್ನು ಹೊಂದಿರುವ ಕರ್ನಾಟಕವು ಕೇರಳ ಹಾಗೂ ಗೋವಾ ರಾಜ್ಯಗಳಂತೆ ಪ್ರವಾಸೋದ್ಯಮದಲ್ಲಿ ಬೆಳವಣಿಗೆ ಕಂಡಿಲ್ಲ. ಇಲ್ಲಿನ ಋಣಾತ್ಮಕ ಚಿಂತನೆಯನ್ನು ಬದಿಗೊತ್ತಿ ಸರಕಾರದ ಅನುದಾನದ ಜತೆಗೆ ಅಧಿಕಾರಿಗಳ ದೂರದೃಷ್ಟಿಯ ಮೂಲಕ ಪ್ರವಾಸೋದ್ಯಮಕ್ಕೆ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.

ಮೂಡ ಅಧ್ಯಕ್ಷ ರವಿಶಂಕರ ಮಿಜಾರು ಮಾತನಾಡಿ, ದ.ಕ. ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ಪೂರಕವಾದ ಅವಕಾಶಗಳನ್ನು ಜಗತ್ತಿಗೆ ತೆರೆದಿಡುವ ನಿಟ್ಟಿನಲ್ಲಿ ಡಿಸೆಂಬರ್, ಜನವರಿಯೊಳಗೆ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಬೇಕಾಗಿದೆ ಎಂದರು.

ಈ ಸಂದರ್ಭ ದ.ಕ. ಜಿಲ್ಲೆಯ ಪ್ರವಾಸಿ ತಾಣಗಳನ್ನು ಪ್ರದರ್ಶಿಸುವ 2 ನಿಮಿಷಗಳ ವೀಡಿಯೋವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರಿನ ಬೀಚ್‌ಗೂ ಬ್ಲ್ಯೂಟ್ಯಾಗ್‌

''ಕೇರಳದ ಬೇಕಲ್, ನೆರೆಯ ಪಡುಬಿದ್ರೆ ಬೀಚ್‌ನಂತೆ ಮಂಗಳೂರಿನ ಬೀಚ್‌ಗಳಿಗೂ ಬ್ಲ್ಯೂ ಟ್ಯಾಗ್ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ವಹಿಸಲಾಗುವುದು. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು, ನವೆಂಬರ್‌ನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬೀಚ್‌ಗಳು ಗುರುತಿಸಲ್ಪಟ್ಟಾಗ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯಾಗಲಿದೆ. ಕೊರೋನ 3ನೆ ಅಲೆಯನ್ನು ನಾವು ನೋಡದಂತೆ ಮುಂಜಾಗೃತಾ ಕ್ರಮಗಳೊಂದಿಗೆ ನಮ್ಮಲ್ಲಿನ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳಿಗೆ ಒತ್ತು ನೀಡಬೇಕಾಗಿದೆ.''

ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ. ಜಿಲ್ಲೆ

‘‘ದ.ಕ. ಜಿಲ್ಲೆಯು ಅತ್ಯಂತ ರಮಣೀಯ ಪ್ರವಾಸಿ ತಾಣಗಳನ್ನು ಹೊಂದಿದೆ. ಅವುಗಳನ್ನು ಜಗತ್ತಿಗೆ ತೋರಿಸುವ ಕಾರ್ಯ ಆಗಬೇಕಾಗಿದೆ. ನನ್ನ ಕ್ಷೇತ್ರದಲ್ಲಿ ಮೂರು ಕುದ್ರುಗಳಿದ್ದು, ಅವುಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿದೆ. ಕನಿಷ್ಠ ಕುದ್ರು ಒಂದರ ಅಭಿವೃದ್ಧಿಗೆ ಹಲವು ಕೋಟಿ ರೂ.ಗಳ ಅಗತ್ಯವಿದ್ದು, ಸರಕಾರದ ಜತೆಗೆ ಖಾಸಗಿ ಪಾಲುದಾರಿಕೆಯ ಮೂಲಕ ಕುದ್ರುಗಳನ್ನು ಪ್ರವಾಸಿ ತಾಣವಾಗಿಸುವಲ್ಲಿ ಕ್ರಮ ವಹಿಸಲಾಗುವುದು.’’

- ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News