ಮಂಗಳೂರು : ಭಾರತ್‌ ಬಂದ್ ಬೆಂಬಲಿಸಿ ಬಂದರು ಶ್ರಮಿಕರ‌‌ ಪ್ರತಿಭಟನೆ

Update: 2021-09-27 10:20 GMT

ಮಂಗಳೂರು : ದೇಶವ್ಯಾಪಿ ಭಾರತ ಬಂದ್ ಬೆಂಬಲಿಸಿ ಮಂಗಳೂರಿನ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಇಂದು ಕಾರ್ಮಿಕರು ಕೆಲ‌ಸ ಮಯ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ‌ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕ ಫೆಡರೇಶನ್ ರಾಜ್ಯ ಅಧ್ಯಕ್ಷ ಹಾಗೂ‌ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಮಾತನಾಡಿ ಕಳೆದ‌ ಹತ್ತು ತಿಂಗಳಿಂದ‌ ಮೂರು ಕೃಷಿ‌ ಕಾನೂನುಗಳ ವಿರುದ್ದ ರೈತರು ದೆಹಲಿ ಸುತ್ತಮುತ್ತ ಹೋರಾಟ ನಿರತರಾಗಿದ್ದಾರೆ. ‌ಆದರೆ ನರೇಂದ್ರ‌ಮೋದಿ‌ ನೇತೃತ್ವದ ಬಿಜೆಪಿ ಸರ್ಕಾರ ರೈತರ ಜತರ ಮಾತುಕತೆ ನಡೆಸದೆ ಹೋರಾಟವನ್ನು ಹತ್ತಿಕ್ಕಲು ಹಲವು ಯತ್ನಗಳನ್ನು ನಡೆಸಿರುವುದು ಖಂಡನಾರ್ಹ. ಈ ನೂತನ ಕೃಷಿ‌ಕಾನೂನುಗಳು ಕೃಷಿ‌ಕ್ಷೇತ್ರದ ಕಂಪನೀಕರಣಕ್ಕೆ ಅವಕಾಶ ನೀಡಲಿವೆ ಇದರಿಂದ ಫಲವತ್ತಾದ ಕೃಷಿ‌ಭೂಮಿ ಕಾರ್ಪೊರೇಟ್ ಕೈ ವಶವಾಗಲಿದೆ ಇದರಿಂದ ಭವಿಷ್ಯದಲ್ಲಿ ದೇಶದಲ್ಲಿ ಆಹಾರ ಸಮಸ್ಯೆ ಎದುರಿಸಲಿದೆ ಕೋಟ್ಯಾಂತರ ಜನರು ಬೆಲೆ ಏರಿಕೆ ಹಾಗೂ ಹಸಿವಿನಿಂದ ತತ್ತರಿಸಲಿದ್ದಾರೆ ಹೀಗಾಗಿ ದೇಶದ‌ಭವಿಷ್ಯದ ದೃಷ್ಟಿಯಿಂದ ರೈತರ ಈ‌ ಹೋರಾಟವನ್ನು ಕಾರ್ಮಿಕರು ಬೆಂಬಲಿಸಬೇಕು ಎಂದು ಕರೆ ನೀಡಿದರು.

ಮತ್ತೊಂದು ಕಡೆ ದೇಶದಲ್ಲಿ ಜಾರಿಯಲ್ಲಿದ್ದ 29 ಕಾರ್ಮಿಕ‌ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ರೂಪಿಸಿದೆ ಇದರಿಂದ ಸ್ವಾತಂತ್ರ್ಯ ಪೂರ್ವದಿಂದಲೂ ಜಾರಿಯಲ್ಲಿದ್ದ ಹಲವು ಹಕ್ಕುಗಳು ಮತ್ತು ಸಾಮಾಜಿಕ ಸುರಕ್ಷತೆಗಳಿಂದ ಕಾರ್ಮಿಕರು ವಂಚಿತರಾಗಲಿದ್ದಾರೆ. ಈ ಹಿನ್ನಲೆಯಲ್ಲಿ ರೈತ ಕಾರ್ಮಿಕರ‌ ಈ‌ ಐಕ್ಯ ಚಳವಳಿ ‌ಮೂಲಕ ಈ ನೀತಿಗಳನ್ನು ಹಿಮ್ಮೆಟ್ಟಿಸಲು ಅವರು ಕರೆ ನೀಡಿದರು.

ಬಂದರು ಶ್ರಮಿಕರ‌ ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್, ಕಾರ್ಯದರ್ಶಿ ಇಮ್ತಿಯಾಝ್, ಆದಿವಾಸಿ ಹಾಗೂ ದಲಿತ ಹಕ್ಕುಗಳ‌ ಸಮಿತಿಯ ಯೋಗಿಶ್ ಜಪ್ಪಿನ ಮೊಗರು ಹರೀಶ ಕೆರೆಬೈಲ್, ಹಂಜಾ ತಂದೊಲಗಿ, ಸಿದ್ದಿಕ್ ಫಾರುಕ್ ಉಲ್ಲಾಳ,‌ ಮಜೀದ್ ಉಲ್ಲಾಳ, ಮಾಧವ ಕಾವೂರು, ಮೊಯಿದಿನ್ ಕಲ್ಕಟ್ಟ, ಯಲ್ಲಪ್ಪ, ಡಿವೈಎಫ್ಐ ಮುಖಂಡರಾದ ಎ.ಬಿ. ನೌಶಾದ್, ಹನೀಫ್ ಬೆಂಗ್ರೆ, ಅಸ್ಲಾಂ ಬೆಂಗ್ರೆ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News