"ಹಿಂದುತ್ವ ತೀವ್ರಗಾಮಿಗಳಿಂದ ಹಿಂದೂ ಧರ್ಮಕ್ಕೆ ಅಪಾಯವಿದೆ" ಎಂದು ಲೇಖನ ಪ್ರಕಟಿಸಿದ್ದ ಭಾರತೀಯ ಪ್ರೊಫೆಸರ್‌ ಗೆ ಬೆದರಿಕೆ

Update: 2021-09-27 11:08 GMT
Photo: Messey university

ಹೊಸದಿಲ್ಲಿ:  ಹಿಂದುತ್ವ ಸಿದ್ಧಾಂತದಲ್ಲಿ "ಇಸ್ಲಾಮೋಫೋಬಿಕ್ ಶಕ್ತಿಗಳು" ಕುರಿತಂತೆ  ಮೇ ತಿಂಗಳಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದ್ದ ನ್ಯೂಝಿಲ್ಯಾಂಡ್‌ ಮಸ್ಸೆ ವಿಶ್ವವಿದ್ಯಾಲದಯ ಸಂವಹನ ವಿಭಾಗದ ಡೀನ್, ಭಾರತೀಯ ಮೂಲದ ಮೋಹನ್ ದತ್ತಾ ಅವರಿಗೆ  ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಯ ಸಂದೇಶಗಳು ಬಂದ ನಂತರ ಅವರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಅಲ್ಲಿಯ ಪೊಲೀಸರು ಕೈಗೊಂಡಿದ್ದಾರೆ.

"ಹಿಂದುತ್ವ ತೀವ್ರಗಾಮಿತ್ವದಿಂದ ಹಿಂದು ಧರ್ಮಕ್ಕೆ ಅಪಾಯವಿದೆ, ನ್ಯೂಝಿಲ್ಯಾಂಡ್‌ ನಲ್ಲಿನ ಹಿಂದುತ್ವದ ಅಸ್ತಿತ್ವವನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ" ಎಂದು ಅವರು ತಮ್ಮ ಲೇಖನದಲ್ಲಿ ಬರೆದಿದ್ದರು.

ಆಗಸ್ಟ್ ತಿಂಗಳಿನಲ್ಲಿ ಈ ಭಾರತೀಯ ಮೂಲದ ಪ್ರೊಫೆಸರ್ ಅವರು "ಡಿಸ್‍ಮ್ಯಾಂಟ್ಲಿಂಗ್ ಗ್ಲೋಬಲ್ ಹಿಂದುತ್ವ" ಎಂಬ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಮುಂಚಿತವಾಗಿ ಆನ್‍ಲೈನ್ ಭಾಷಣ ನೀಡಿದಂದಿನಿಂದ ಅವರಿಗೆ ಹಿಂದುತ್ವ ಸಿದ್ಧಾಂತದ ಬೆಂಬಲಿಗರೆಂದು ತಿಳಿಯಲಾದ ವ್ಯಕ್ತಿಗಳಿಂದ ನಿಂದನಾತ್ಮಕ ಸಂದೇಶಗಳು ಬರುತ್ತಿವೆ. "ಒಂದೆರಡಲ್ಲ,  ಬದಲು ಸಂಘಟನೆಗಳವರು ಎಂದು ತಿಳಿಯುವ ರೀತಿಯಲ್ಲಿ ಬೇರೆ ಬೇರೆ ಜನರಿಂದ ಇಂತಹ ಸಂದೇಶಗಳು ಬರುತ್ತಿವೆ" ಎಂದು ಅವರು ಹೇಳಿದ್ದಾರೆ.

"ದತ್ತಾ ಅವರು ಭಾರತದಲ್ಲಿರುತ್ತಿದ್ದರೆ ಅವರಿಗೆ ಬೆಂಕಿ ಹಚ್ಚುತ್ತಿದ್ದೆವು" ಎಂದು ಒಂದು ಫೇಸ್ ಬುಕ್ ಸಂದೇಶ ಹೇಳಿದೆ.

"ನಮ್ಮ ಮುಂದಿನ ಲೇಖನಗಳನ್ನು ಹೇಗೆ ಪ್ರಕಟಿಸುವುದು ಎಂದು ಯೋಚಿಸುವಂತಾಗಿದೆ. ಭಾರತದಲ್ಲಿ ಕೆಲ ಶಿಕ್ಷಣತಜ್ಞರ ಸದ್ದಡಗಿಸುವ ತಂತ್ರಗಾರಿಕೆಯಂತೆಯೇ ಈಗ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲೂ ನಡೆಯುತ್ತಿದೆ," ಎಂದು ಹೇಳಿರುವ ದತ್ತಾ ಅವರು ನೀಡಿದ ಪೊಲೀಸ್ ದೂರಿನಂತೆ ಅವರಿಗೆ ರಕ್ಷಣೆಯೊದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ನ್ಯೂಜಿಲೆಂಡ್ ಭಾರತೀಯ ಅಲ್ಪಸಂಖ್ಯಾತರ  ಸಂಸ್ಥೆಯು ದತ್ತಾ ಅವರ ಬೆಂಬಲಕ್ಕೆ ನಿಂತಿದ್ದು ಮಾನವ ಹಕ್ಕು ಆಯೋಗ ಹಾಗೂ ಮಸ್ಸೆ ವಿವಿಗೆ  ಪತ್ರ ಬರೆದಿದೆ. ಹಿಂದೂಸ್ ಫಾರ್ ಹ್ಯುಮನ್ ರೈಟ್ಸ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕೂಡ ದತ್ತಾ ಅವರನ್ನು ಬೆಂಬಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News