ಪ್ರೊ. ಡಾ. ಅಮೃತ ಸೋಮೇಶ್ವರಗೆ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ 'ಗೌರವಶ್ರೀ 2020' ಪ್ರದಾನ
ಉಳ್ಳಾಲ : ಹಿರಿಯ ಜನಪದ ವಿಧ್ವಾಂಸರು, ಸಾಹಿತಿಗಳಾದ ಪ್ರೊ. ಡಾ. ಅಮೃತ ಸೋಮೇಶ್ವರ ಅವರ 86ನೇ ಹುಟ್ಟುದಿನ ಪ್ರಯುಕ್ತ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ "ಗೌರವಶ್ರೀ" ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡಮಿ ವತಿಯಿಂದ ಪ್ರದಾನ ಮಾಡಲಾಗುವ 2020 ನೇ ಸಾಲಿನ ಗೌರವಶ್ರೀ ಪ್ರಶಸ್ತಿಗೆ ಮಂಗಳೂರಿನ ಹಿರಿಯ ಸಾಹಿತಿಗಳು ಮತ್ತು ಜನಪದ ವಿದ್ವಾಂಸ ಪ್ರೊ. ಡಾ. ಅಮೃತ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿತ್ತು. ಕಳೆದ ಸೆ.12 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿತ್ತು. ಅನಾರೋಗ್ಯದ ಕಾರಣ ಸಾಹಿತಿ ಅಮೃತರಿಗೆ ಬೆಂಗಳೂರಿಗೆ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಅಮೃತರ ಸೋಮೇಶ್ವರದ ಸ್ವಗೃಹ ಒಲುಮೆಯಲ್ಲಿ "ಗೌರವಶ್ರೀ" ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ವಿ ವಸಂತ್ ಕುಮಾರ್ ಮಾತನಾಡಿ ಅಮೃತರಂತಹ ಮಹಾನ್ ಸಾಹಿತಿಗಳಿಗೆ ಇಂದು ಪ್ರದಾನಿಸಲಾದ ಪ್ರಶಸ್ತಿಯ ಗೌರವ ಇಮ್ಮಡಿಯಾದಂತಾಗಿದೆ. ಅವರ ರಚನೆಯ "ಮಾನವತೆ ಗೆದ್ದಾಗ"ಎಂಬ ಕೃತಿಗೆ ಇಂದು ಅವರೇ ನಿದರ್ಶನರಾಗಿದ್ದಾರೆ. ಅವರ ಜೀವನ ಶೈಲಿಯೇ ನಮಗೆಲ್ಲರಿಗೂ ಮಾದರಿ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಅಮೃತ ಸೋಮೇಶ್ವರ ಅವರು ಮನೆಯಲ್ಲೇ ಪ್ರಶಸ್ತಿ ಪ್ರದಾನದ ಸನ್ನಿವೇಶ ಸೃಷ್ಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು. ನನ್ನ ಪಾಡಿಗೆ ನಾನು ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದೇನೆ. ಆಶೆ, ಆಕಾಂಕ್ಷೆ ಇಲ್ಲದೆ ನನ್ನ ಇತಿ, ಮಿತಿಯಲ್ಲಿ ಮಾಡಿದ ಕೆಲಸವನ್ನ ಗಮನಿಸಿ ಗೌರವಿಸಿದಕ್ಕೆ ಕೃತಜ್ಞತೆ ಅರ್ಪಿಸಿದರು.
ಕರ್ನಾಟಕ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಆದ ಎನ್. ಕರಿಯಪ್ಪ, ಪದಾಧಿಕಾರಿಗಳಾದ ಹರೀಶ್ ಕುಮಾರ್, ಡಾ. ಬಿ. ಎಂ ಶರಭೇಂದ್ರ ಸ್ವಾಮಿ, ಮಂಗಳೂರು ಆಕಾಶವಾಣಿಯ ಸೂರ್ಯನಾರಾಯಣ ಭಟ್, ಅಮೃತ ಸೋಮೇಶ್ವರರ ಪತ್ನಿ ನರ್ಮದಾ ಹಾಗು ಇತರರು ಉಪಸ್ಥಿತರಿದ್ದರು.