ಇಂಧನ ಖರೀದಿಸಲು ಮುಗಿಬಿದ್ದ ಬ್ರಿಟಿಷರು; ಪ್ರಮುಖ ನಗರಗಳ ಶೇ90ರಷ್ಟು ಪೆಟ್ರೋಲ್ ಬಂಕ್‍ಗಳು ಖಾಲಿ

Update: 2021-09-27 13:06 GMT

 ಲಂಡನ್: ದೇಶದಲ್ಲಿ ಟ್ರಕ್ ಚಾಲಕರು ಕೊರತೆ ಎದುರಾಗಿರುವ ನಡುವೆ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ಸಮಸ್ಯೆ ಇನ್ನಷ್ಟು  ಹೆಚ್ಚುತ್ತಿರುವಂತೆಯೇ ಜನರು ಇಂಧನವನ್ನು  ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಆರಂಭಿಸಿದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳ ಶೇ 90ರಷ್ಟು ಪೆಟ್ರೋಲ್ ಬಂಕುಗಳಲ್ಲಿ ಇಂಧನ ಸ್ಟಾಕ್ ಮುಗಿದು ಹೋದ ಬೆಳವಣಿಗೆ ಇಂದು ನಡೆದಿದೆ.

ಬ್ರಿಟನ್ ದೇಶವು ಬ್ರೆಕ್ಸಿಟ್‍ನಿಂದ ಹೊರ ಬಂದ ನಂತರದ ಬೆಳವಣಿಗೆಯಲ್ಲಿ ಹಾಗೂ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾರಿ ಚಾಲಕರ ಕೊರತೆ ಎದುರಾಗಿರುವುದು ಬ್ರಿಟಿಷ್ ಪೂರೈಕೆ ಸರಪಳಿ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರಿದ್ದು ಆಹಾರದಿಂದ ಇಂಧನ ಪೂರೈಕ ತನಕ ಎಲ್ಲವೂ ವ್ಯತ್ಯಯಗೊಂಡು ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯಾಗಿರುವ ಇಂಗ್ಲೆಂಡ್ ಬೃಹತ್ ಸಮಸ್ಯೆ ಎದುರಿಸುವಂತಾಗಿದೆ.

ನೈಸರ್ಗಿಕ ಅನಿಲದ ಬೆಲೆಗಳ ಏರಿಕೆಯಿಂದ ಮುಂದೆ ಆಹಾರ ಕೊರತೆಯೂ ಎದುರಾಗುವುದನ್ನು ತಪ್ಪಿಸುವ ಯತ್ನವಾಗಿ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದ ಸರಕಾರ ಮಿಲಿಯಗಟ್ಟಲೆ ಪೌಂಡ್ ಖರ್ಚು ಮಾಡಿದೆ. ಅವಸರದಿಂದ ಇಂಧನ ಖರೀದಿ ಮಾಡದಂತೆ ಸಚಿವರು ಮನವಿ ಮಾಡಿದ ಹೊರತಾಗಿಯೂ ರವಿವಾರದಿಂದಲೇ ದೇಶದ ವಿವಿಧೆಡೆ ಕಾರುಗಳು ಪೆಟ್ರೋಲ್ ಬಂಕುಗಳೆದುರು ಸರತಿ ನಿಂತಿದ್ದವು. ದೇಶದ ಪ್ರಮುಖ ನಗರಗಳ ಪೆಟ್ರೋಲ್ ಪಂಪುಗಳು ಒಂದೋ ಬಂದ್ ಆಗಿವೆ ಅಥವಾ ಇಂಧನ ಅಲಭ್ಯ ಎಂಬ ಬೋರ್ಡುಗಳು ಅಲ್ಲಿ ನೇತಾಡುತ್ತಿವೆ.

ಬ್ರೆಕ್ಸಿಟ್‍ಗೂ ಈ ಚಾಲಕರ ಕೊರತೆಗೂ ಸಂಬಂಧವಿಲ್ಲ ಎಂದು ಬ್ರಿಟಿಷ್ ಸಚಿವರು ಹೇಳುತ್ತಿದ್ದರೂ ಬ್ರೆಕ್ಸಿಟ್‍ನಿಂದ ಬ್ರಿಟನ್ ಹೊರಬಂದ ನಂತರ ಸುಮಾರು 25,000 ಟ್ರಕ್ ಚಾಲಕರು ಯುರೋಪ್‍ಗೆ ಮರಳಿದ್ದಾರೆ. ದೇಶದಲ್ಲಿ ಒಂದು ಲಕ್ಷ ಟ್ರಕ್ ಚಾಲಕರ ಕೊರತೆಯಿದೆಯೆನ್ನಲಾಗಿದೆ. 5,000 ವಿದೇಶಿ ಟ್ರಕ್ ಚಾಲಕರಿಗೆ ತಾತ್ಕಾಲಿಕ ವೀಸಾ ನೀಡುವುದಾಗಿ ಸರಕಾರ ರವಿವಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News