×
Ad

ಸಮಾಜಕ್ಕೆ ಉಪಯುಕ್ತದ ಸಂಶೋಧನೆ ಅಗತ್ಯವಿದೆ: ಪ್ರೊ.ರಾಮಗೋಪಾಲ್

Update: 2021-09-27 19:03 IST
ಪ್ರೊ. ರಾಮಗೋಪಾಲ್

ಮಣಿಪಾಲ, ಸೆ.27: ಭಾರತದ ಸಂಶೋಧಕರು ತಮ್ಮ ವಿಷಯಗಳಲ್ಲಿ ಸಂಶೋಧನೆಯ ಜೊತೆಜೊತೆಗೆ ನಮ್ಮ ಸಮಾಜಕ್ಕೆ ಉಪಯುಕ್ತ ವೆನಿಸಬಲ್ಲ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ಹೊಸದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ನಿರ್ದೇಶಕ ಪ್ರೊ.ವಿ.ರಾಮಗೋಪಾಲ್ ರಾವ್ ಹೇಳಿದ್ದಾರೆ.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್ ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಸಂಶೋಧನೆಯ ವಾಣಿಜ್ಯೀಕರಣ ಮತ್ತು ತಂತ್ರಜ್ಞಾನದ ಉದ್ಯಮಶೀಲತೆ’ ಎಂಬ ವಿಷಯದ ಕುರಿತು ರವಿವಾರ ಆಯೋಜಿಸಲಾದ ವೆಬಿನಾರ್‌ನಲ್ಲಿ ಪ್ರೊ.ರಾಮಗೋಪಾಲ್ ರಾವ್ ಮಾತನಾಡುತಿದ್ದರು.

ಆಳವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಭಾರತವು ಹೆಚ್ಚಿನ ಸಂಖ್ಯೆಯ ಸಮಸ್ಯೆಗಳನ್ನು ಹೊಂದಿರು ವುದರಿಂದ ಮತ್ತು ಸಂಶೋಧನಾ ಕಾರ್ಯಗಳಿಗೆ ಸರಕಾರ ಹಣವನ್ನು ಒದಗಿಸುತ್ತಿ ರುವುದರಿಂದ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಒಳಗೊಂಡು ಉದ್ಯಮ ಶೀಲತೆಯನ್ನು ಮುನ್ನಡೆಸುವಲ್ಲಿ ಅಧ್ಯಾಪಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಪ್ರೊ.ರಾವ್ ಕರೆಕೊಟ್ಟರು.

ಇಂದು ಸ್ಟಾರ್ಟ್‌ ಅಪ್‌ಗಳ ಮೂಲಕ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಸ್ಟಾರ್ಟಅಪ್‌ಗಳು ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸೇತುವೆಯಾಗಿದ್ದು, ಉದ್ಯಮ - ಶೈಕ್ಷಣಿಕ ಸಂಸ್ಥೆಗಳ ಸಂಬಂಧವು ಸಹಯೋಗದ ಆಧಾರದ ಮೇಲೆ ಇರಬೇಕೇ ಹೊರತು ತಾತ್ಕಾಲಿಕ ವಹಿವಾಟಿನ ಪ್ರಕ್ರಿಯೆಯಾಗಿರಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮಾತನಾಡಿ, ರಾಷ್ಟ್ರೀಯ ನಾವೀನ್ಯತೆ ಮತ್ತು ಸ್ಟಾರ್ಟ್‌ಅಪ್ ನೀತಿ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸರಕಾರದ ಅನುದಾನದಿಂದಾಗಿ ಇತ್ತೀಚಿನ ದಿನಗಳಲ್ಲಿ ಅಧ್ಯಾಪಕರು ನಡೆಸುವ ಸ್ಟಾರ್ಟ್‌ಅಪ್‌ಗಳು ಮಹತ್ವ ಪಡೆಯುತ್ತಿವೆ. ಮಣಿಪಾಲ ಮತ್ತು ಇತರ ಸಂಸ್ಥೆಗಳ ಬೋಧಕವರ್ಗದ ಸದಸ್ಯರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಅವರ ಸಂಶೋಧನಾ ಕಾರ್ಯವನ್ನು ವಾಣಿಜ್ಯೀಕರಣ ಗೊಳಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಈ ವೆಬಿನಾರ್ ಸಹಾ ಯ ಮಾಡುತ್ತದೆ ಎಂದು ತಿಳಿಸಿದರು.

ಎನ್‌ಐಟಿಕೆ ಸುರತ್ಕಲ್ ನಿರ್ದೇಶಕ ಪ್ರೊ.ಕರಣಂ ಉಮಾಮಹೇಶ್ವರ ರಾವ್ ಮಾತನಾಡಿ, ಶಿಕ್ಷಣತಜ್ಞರು ತಮ್ಮ ಸಂಶೋಧನೆಗಳನ್ನು ಪದವಿ ಪಡೆಯುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಸಂಶೋಧನಾ ಕಾರ್ಯವನ್ನು ಯಶಸ್ವಿಗೊಳಿಸಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಸಿಐಐ ಮಂಗಳೂರಿನ ಚೇರ್ಮನ್ ಜೀವನ್ ಸಲ್ಡಾನ್ಹಾ, ಸಂಶೋಧನೆಯ ವಾಣಿಜ್ಯೀಕರಣವು ಕೈಗಾರಿಕೆಗಳಿಗೆ ಸಂಬಂಧಿಸಿದೆ ಮತ್ತು ಕೈಗಾರಿಕೆಗಳು ನಿರಂತರವಾಗಿ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News