ಮಂಗಳೂರು: 'ಭಾರತ್ ಬಂದ್' ಬೆಂಬಲಿಸಿ ಪ್ರತಿಭಟನೆ, ರಸ್ತೆ ತಡೆ
ಮಂಗಳೂರು, ಸೆ.27: ಕೃಷಿ ಕಾಯ್ದೆಗಳಿಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ 'ಸಂಯುಕ್ತ ಕಿಸಾನ್ ಮೋರ್ಚಾ' ಸಂಘಟನೆಯು ನೀಡಿದ ದೇಶವ್ಯಾಪಿ ಭಾರತ ಬಂದ್ ಬೆಂಬಲಿಸಿ ಸೋಮವಾರ ದ.ಕ.ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯಿತು.
ಸರಕಾರಿ ಮತ್ತು ಖಾಸಗಿ ಬಸ್‌ಗಳು, ಆಟೋ ರಿಕ್ಷಾಗಳು ಎಂದಿನಂತೆ ಸಂಚರಿಸಿದ್ದವು. ಅಂಗಡಿ, ಮಳಿಗೆಗಳು ತೆರೆದಿದ್ದವು. ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಆದರೆ ಭಾರತ್ ಬಂದ್ ಬೆಂಬಲಿಸಿ ಶ್ರಮಿಕ ಸಂಘ, ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ಎಸ್‌ಡಿಪಿಐ ರಸ್ತೆ ತಡೆ ನಡೆಸಿತು.
ಶ್ರಮಿಕ ಸಂಘದ ಪ್ರತಿಭಟನೆ
ಭಾರತ್ ಬಂದ್ ಬೆಂಬಲಿಸಿ ನಗರದ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಕಾರ್ಮಿಕರು ಕೆಲವು ಸಮಯ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕ ಫೆಡರೇಶನ್ ರಾಜ್ಯಾಧ್ಯಕ್ಷ ಹಾಗೂ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿ ಕಳೆದ ಹತ್ತು ತಿಂಗಳಿಂದ ಮೂರು ಕೃಷಿ ಕಾನೂನುಗಳ ವಿರುದ್ದ ರೈತರು ಹೊಸದಿಲ್ಲಿಯ ಸುತ್ತಮುತ್ತ ಹೋರಾಟ ನಿರತರಾಗಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ರೈತರ ಜತರ ಮಾತುಕತೆ ನಡೆಸದೆ ಹೋರಾಟವನ್ನು ಹತ್ತಿಕ್ಕಲುಯತ್ನಿಸುತ್ತಿರುವುದು ಖಂಡನೀಯ. ಈ ಕಾನೂನು ಜಾರಿಯಾದರೆ ಕೃಷಿಭೂಮಿ ಕಾರ್ಪೊರೇಟ್ ಕೈ ವಶವಾಗಲಿದೆ. ಇದರಿಂದ ಭಾರತವು ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಎದುರಿಸಲಿದೆ.ಹಾಗಾಗಿ ರೈತರ ಈ ಹೋರಾಟವನ್ನು ಕಾರ್ಮಿಕರು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಬಂದರು ಶ್ರಮಿಕರ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಕಾರ್ಯದರ್ಶಿ ಇಮ್ತಿಯಾಝ್, ಆದಿವಾಸಿ ಹಾಗೂ ದಲಿತ ಹಕ್ಕುಗಳ ಸಮಿತಿಯ ಯೋಗಿಶ್ ಜಪ್ಪಿನಮೊಗರು ಹರೀಶ ಕೆರೆಬೈಲ್, ಹಂಝ ತಂದೊಲಗಿ, ಸಿದ್ದೀಕ್ ಫಾರೂಕ್ ಉಳ್ಳಾಲ, ಮಜೀದ್ ಉಳ್ಳಾಲ, ಮಾಧವ ಕಾವೂರು, ಮೊಯಿದಿನ್ ಕಲ್ಕಟ್ಟ, ಯಲ್ಲಪ್ಪ, ಡಿವೈಎಫ್‌ಐ ಮುಖಂಡರಾದ ಎ.ಬಿ. ನೌಶಾದ್, ಹನೀಫ್ ಬೆಂಗ್ರೆ, ಅಸ್ಲಾಂ ಬೆಂಗ್ರೆ ಪಾಲ್ಗೊಂಡಿದ್ದರು.
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ದ.ಕ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ನಗರದ ಕ್ಲಾಕ್‌ಟವರ್ ಬಳಿ ಸೋಮವಾರ ಅಪರಾಹ್ನ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಎಂ.ಭಟ್ ಭೂ ಸುಧಾರಣಾ ಮತ್ತು ಎಪಿಎಂಸಿ ಹಾಗೂ ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ, ಇದು ರೈತ ವಿರೋಧಿಯಾಗಿದ್ದು ತಕ್ಷಣ ಅವುಗಳನ್ನು ಹಿಂಪಡೆಯಬೇಕು. ಕೃಷಿ ಭೂಮಿ ಕಾರ್ಪೊರೆಟ್ ಸಂಸ್ಥೆಗಳ ಪಾಲಾಗುವುದನ್ನು ತಪ್ಪಿಸಬೇಕು, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಗುತ್ತಿಗೆ ಕೃಷಿಗೆ ಅವಕಾಶ ನೀಡಬಾರದು. ಸಾರ್ವಜನಿಕ ರಂಗಗಳ ಉದ್ಯಮಗಳ ಮಾರಾಟವನ್ನು ನಿಲ್ಲಿಸಬೇಕು. ಬಡ ಮಹಿಳೆಯರ ಮೈಕ್ರೋ ಫೈನಾನ್ಸ್ ಕೈ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಗಳ ಪ್ರಮುಖರಾದ ಎಲ್.ಮಂಜುನಾಥ, ನೆಬಿಸಾ, ರಾಮಚಂದ್ರ, ಗಣೇಶ್ ಪ್ರಸಾದ್, ಈಶ್ವರಿ, ಲಿಲ್ಲಿ, ಯೋಗಿತಾ, ರಂಜಿನಿ ಧನಂಜಯ್ ಮೊದಲಾದವರು ಪಾಲ್ಗೊಂಡಿದ್ದರು
ಎಸ್‌ಡಿಪಿಐ ರಸ್ತೆ ತಡೆ
ನಗರದ ಕ್ಲಾಕ್‌ಟವರ್ ಬಳಿ ಸೋಮವಾರ ಅಪರಾಹ್ನ ಎಸ್‌ಡಿಪಿಐ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ, ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ಮಂಚಿ, ಅನ್ವರ್ ಸಾದತ್ ಬಜತ್ತೂರು, ಕಾರ್ಮಿಕ ಮುಖಂಡ ಖಾದರ್ ಫರಂಗಿಪೇಟೆ ಮಾತನಾಡಿದರು.
ಕಾರ್ಪೊರೇಟರ್ ಮುನೀಬ್ ಬೆಂಗರೆ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಯಾಸೀನ್ ಅರ್ಕುಳ, ಉಪಾಧ್ಯಕ್ಷ ಲ್ಯಾನ್ಸಿ ತೋರಸ್, ಮಂಗಳೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಝಾಕಿರ್ ಉಳ್ಳಾಲ, ಪಕ್ಷದ ಮುಖಂಡರಾದ ಶರೀಫ್ ಪಾಂಡೇಶ್ವರ, ಸಿದ್ದೀಕ್ ಬೆಂಗರೆ, ಮುಝಮ್ಮಿಲ್ ನೂಯಿ ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿದರು