ಆತ್ಮಹತ್ಯೆ ಪ್ರಕರಣ: ದ.ಕ.ಜಿಲ್ಲಾ ನ್ಯಾಯಾಲಯದ ಕಟ್ಟಡಗಳಿಗೆ ತಡೆಬೇಲಿ
ಮಂಗಳೂರು, ಸೆ.27: ದ.ಕ.ಜಿಲ್ಲಾ ನ್ಯಾಯಾಲಯದ ಕಟ್ಟಡಗಳಿಂದ ವಿಚಾರಣಾಧೀನ ಕೈದಿಗಳು ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ನ್ಯಾಯಾಲಯದ ಕಟ್ಟಡಗಳಿಗೆ ತಡೆಬೇಲಿ ಅಳವಡಿಸುವ ಕೆಲಸ ಆರಂಭಗೊಂಡಿದೆ.
ಆ.31ರಂದು ಆರೋಪಿಯೋರ್ವ ನ್ಯಾಯಾಲಯ ಕಟ್ಟಡದ 6ನೇ ಮಹಡಿಯ ಪ್ಯಾಸೇಜ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. 2017ರಲ್ಲಿಯೂ ಆರೋಪಿಯೋರ್ವ ಇದೇ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಬೆಂಗಾವಲು ಪೊಲೀಸರ ಕಣ್ತಪ್ಪಿಸಿ ನ್ಯಾಯಾಲಯದ ಕಟ್ಟಡಗಳಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಭಾರೀ ಚರ್ಚೆಗೂ ಕಾರಣ ವಾಗಿತ್ತು. ನ್ಯಾಯಾಲಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶಾದ ಮುರಲೀಧರ ಪೈ ಬಿ. ಕಾರಿಡಾರ್‌ನ ತೆರೆದ ಸ್ಥಳದಲ್ಲಿ ನೆಟ್ ಅಥವಾ ಗ್ರಿಲ್ಲರ್ ಹಾಕಿ ಮುಚ್ಚುವಂತೆ ಸೂಚನೆ ನೀಡಿದ್ದರು.
ಅದರಂತೆ ಮೂರು ಕಟ್ಟಡಗಳ ಸುಮಾರು ನಾಲ್ಕೈದು ಮಹಡಿಯ ಕಾರಿಡಾರ್‌ಗೆ ಸುರಕ್ಷತೆಯ ದೃಷ್ಟಿಯಿಂದ ತಡೆಬೇಲಿ ಅಳವಡಿಸಲಾಗುತ್ತಿದೆ.