×
Ad

ಉಡುಪಿ ಜಿಲ್ಲೆಯ ಮೂಲಕವೇ ಎಲ್ಲಾ ರಫ್ತು ನಡೆಸಲು ಆದ್ಯತೆ: ಡಿಸಿ ಕೂರ್ಮಾ ರಾವ್

Update: 2021-09-27 20:22 IST

ಉಡುಪಿ, ಸೆ.27: ಜಿಲ್ಲೆಯಲ್ಲಿ ತಯಾರಾಗುವ ಎಲ್ಲಾ ವಸ್ತುಗಳನ್ನು ಹಾಗೂ ಉತ್ಪನ್ನಗಳನ್ನು ಜಿಲ್ಲೆಯಿಂದಲೇ ನೇರವಾಗಿ ರಫ್ತು ಮಾಡುವುದಕ್ಕೆ ಆದ್ಯತೆಯನ್ನು ನೀಡಬೇಕು ಹಾಗೂಇದಕ್ಕೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ.

ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಮಣಿಪಾಲದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸೋಮವಾರ ವಾಣಿಜ್ಯ ಸಪ್ತಾಹದ ಅಂಗವಾಗಿ ನಡೆದ ರಫ್ತುದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ದೊರೆಯುವ ಮತ್ತು ಉತ್ಪಾದಿಸುವ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು, ಸಮುದ್ರ ಉತ್ಪನ್ನಗಳು ಸೇರಿದಂತೆ ವಿವಿಧ ವೈಶಿಷ್ಠ ಪೂರ್ಣ ವಸ್ತುಗಳನ್ನು ಬ್ರಾಂಡಿಂಗ್ ಮಾಡಿ, ರಫ್ತು ಮಾಡಲು ನೀಲ ನಕಾಶೆ ಸಿದ್ದಪಡಿಸಲಾಗುವುದು ಎಂದು ಅವರು ನುಡಿದರು.

ಜಿಲ್ಲೆಯಲ್ಲಿ ಗೇರುಬೀಜವನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ಆದರೆ ಇದನ್ನು ಹೊರತು ಪಡಿಸಿ ವಿವಿಧ ಕರಕುಶಲ ಉತ್ಪನ್ನಗಳನ್ನು ತಯಾರಿಸ ಲಾಗುತ್ತಿದ್ದು ಇದರೊಂದಿಗೆ ಸಮುದ್ರ ಉತ್ಪನ್ನಗಳನ್ನು ಕೇರಳಕ್ಕೆ ಬದಲು ಇಲ್ಲಿಂದಲೇ ರಫ್ತು ಮಾಡಲು ಉದ್ದಿಮೆದಾರರು ಪ್ರಯತ್ನಿಸಬೇಕು. ಜಿಲ್ಲೆಯದೇ ಆದ ವಿಶಿಷ್ಟ ಉತ್ಪನ್ನಗಳಿಗೆ ಬ್ರಾಂಡಿಂಗ್ ಮಾಡಿಸಲು ಸಹ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಂದಿನ ಕಾರ್ಯಗಾರದಲ್ಲಿ ಮೂಡಿಬರುವ ಅಭಿಪ್ರಾಯಗಳನ್ನು ತಿಳಿದು ಕೊಂಡು, ಇಲ್ಲಿಂದ ವಿವಿಧ ವಸ್ತುಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಅಗತ್ಯವಾಗಿ ಬೇಕಿರುವ ಅನುಮತಿ ಮತ್ತಿತರ ಅವಶ್ಯಕತೆಗಳ ಕುರಿತಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು ದೊರಕಿಸಲು ಪ್ರಯತ್ನಿಸಲಾಗುವುದು ಎಂದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ‘ಸಿಂಗಲ್ ವಿಂಡೋ’ ವ್ಯವಸ್ಥೆ ಮೂಲಕ ಬಗೆಹರಿ ಸಲಾಗುತ್ತದೆ ಎಂದವರು ಭರವಸೆ ನೀಡಿದರು.

ಕೆನರಾ ಬ್ಯಾಂಕ್‌ನ ಮುಖ್ಯ ಪ್ರಬಂದಕ ರಾಮಾ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಗೇರುಬೀಜ ಮತ್ತು ಮೀನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿದೆ. ರಫ್ತು ಮಾಡಲು ಇತರ ಸಂಪನ್ಮೂಲಗಳೂ ಸಹ ಜಿಲ್ಲೆಯಲ್ಲಿದ್ದು ಉತ್ತಮ ರಸ್ತೆ, ಜಲ ಮತ್ತು ವಾಯು ಸಾರಿಗೆ ವ್ಯವಸ್ಥೆ ಕೂಡ ಇಲ್ಲಿರುವುದರಿಂದ ಉದ್ದಿಮೆದಾರರು ಇವುಗಳ ಸದುಪಯೋಗ ಪಡೆಯಬೇಕು. ಕೆನರಾ ಬ್ಯಾಂಕ್ ವತಿಯಿಂದ ರಫ್ತು ಉದ್ಯಮಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನೂ ನೀಡಲಾಗುವುದು ಎಂದರು.

ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಉಡುಪಿ ನೋಡೆಲ್ ಅಧಿಕಾರಿ ರಮಾನಂದ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗೇರುಬೀಜ ಉತ್ಪಾದಕ ಸಂಘದ ಅಧ್ಯಕ್ಷ ಸಂತೋಷ್ ಡಿಸಿಲ್ವಾ, ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಬಾಳಿಗ ಉಪಸ್ಥಿತರಿದ್ದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಸ್ವಾಗತಿಸಿದರು. ಲೀಡ್ ಡಿಸ್ಟ್ರಿಕ್ ಮ್ಯಾನೇಜರ್ ಪೀರ್‌ಸಾಬ್ ಎಂ.ಪಿಂಜಾರ ವಂದಿಸಿದರೆ, ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News