×
Ad

ಮಂಗಳೂರು : ಅಪ್ರಾಪ್ತೆಯ ಅಪಹರಣ, ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ

Update: 2021-09-27 20:58 IST

ಮಂಗಳೂರು, ಸೆ. 27: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಬೆ ಸಮೀಪದ ಜನತಾ ಕಾಲನಿಯಿಂದ ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ವಿಟ್ಲ ಕಸ್ಬಾ ಉಕ್ಕುಡದ ಬಾಲಕೃಷ್ಣ (25) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1(ಪೊಕ್ಸೊ) ನ್ಯಾಯಾಲಯವು 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಪೊಕ್ಸೊ ಪ್ರಕರಣದಡಿ ಕಠಿಣ ಶಿಕ್ಷೆಯಲ್ಲದೆ 75,000 ರೂ. ದಂಡ ಮತ್ತು ಅಪಹರಣ ಪ್ರಕರಣಕ್ಕೆ 5 ವರ್ಷ ಕಠಿಣ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಆದೇಶಿಸಿದ್ದಾರೆ.

ದಂಡದ ಮೊತ್ತದಲ್ಲಿ 50,000 ರೂ.ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ಜತೆಗೆ ಸರಕಾರ ಸಂತ್ರಸ್ತೆಗೆ 2 ಲ.ರೂ. ಪರಿಹಾರ ನೀಡಬೇಕು.85,000 ರೂ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳ ಕಠಿಣ ಶಿಕ್ಷೆ ವಿಧಿಸಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.

2019ರ ಜು. 25ರಂದು ಆರೋಪಿಯು ಬಾಲಕೃಷ್ಣ ತನ್ನದೇ ಊರಿನ ಪರಿಚಿತ ಬಾಲಕಿ ಶಾಲೆಗೆ ಹೋಗುವಾಗ ಪರಶುರಾಮ ಎಂಬಾತನ ಸಹಕಾರದಿಂದ ಅಪಹರಿಸಿದ್ದ. ಬಿ.ಸಿರೋಡ್‌ವರೆಗೆ ಬೈಕ್‌ನಲ್ಲಿ ಕರೆದೊಯ್ದ ಅನಂತರ ಬಸ್‌ನಲ್ಲಿ ಮೂಡುಬಿದಿರೆ ನೆಲ್ಲಿಕಾರು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಲ್ಲದೆ ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಎಂದು ಆರೋಪಿಸಲಾಗಿತ್ತು.

ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೊ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News