ಸಂಚಾರಿ ಪೊಲೀಸರಿಗೆ ವಿಂಡೋ ಟಿಂಟ್ ಮೀಟರ್; ನಿಯಮ ಪಾಲಿಸಲು ಸಾರ್ವಜನಿಕರಿಗೆ ಕಮಿಷನರ್ ಶಶಿಕುಮಾರ್ ಸೂಚನೆ
ಮಂಗಳೂರು : ವಾಹನ ತಪಾಸಣೆ ವೇಳೆ ಚತುಷ್ಚಕ್ರ ವಾಹನಗಳ ಕಿಟಕಿಗೆ ಹಾಕಿರುವ ಟಿಂಟ್ ಪತ್ತೆಗೆ ಸಹಕಾರಿಯಾಗುವಂತೆ ನಗರದ ಸಂಚಾರಿ ಪೊಲೀಸರಿಗೆ ವಿಂಡೋ ಟಿಂಟ್ ಮೀಟರ್ ಎಂಬ ಯಂತ್ರವನ್ನು ನೀಡಲಾಗಿದೆ.ಮೊಬೈಲ್ ಮಾದರಿಯ ಈ ಟಿಂಟ್ ಮೀಟರ್, ಗಾಜುಗಳಲ್ಲಿ ಅಳವಡಿಸಲಾಗಿರುವ ಟಿಂಟ್‌ಗಳ ಪ್ರಮಾಣವನ್ನು ಪತ್ತೆ ಹಚ್ಚುತ್ತಿದೆ. ಪ್ರಸಕ್ತ ನಗರದ ಕೆಲವೊಂದು ಸರ್ಕಲ್‌ಗಳಲ್ಲಿ ಸಂಚಾರಿ ಪೊಲೀಸರಿಗೆ ತಪಾಸಣೆಗಾಗಿ ಈ ಟಿಂಟ್ ಮೀಟರ್ ಒದಗಿಸಲಾಗಿದೆ ಎಂದು ಟಿಂಟ್ ಮೀಟರ್‌ನ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕೋರ್ಟ್ ಆರ್ಡರ್ ಪ್ರಕಾರ, ಮುಂದುಗಡೆ ಮತ್ತು ಹಿಂದುಗಡೆಯ ಕಿಟಕಿ ಬಾಗಿಲಿನ ಗಾಜು ಶೇ. 70ರಷ್ಟು ಪಾರದರ್ಶಕವಾಗಿರಬೇಕು. ಇದು ವಾಹನ ಉತ್ಪಾದಕರಿಗೆ ಇರುವ ನಿರ್ದೇಶನವಾಗಿದ್ದು, ಇದಕ್ಕಿಂತ ಹೆಚ್ಚಿನ ಟಿಂಟ್ ಇರಬಾರದು. ಕೆಲವೊಂದು ಸಂದರ್ಭಗಳಲ್ಲಿ ಶೋರೂಂಗಳಲ್ಲೇ ವಾಹನ ಖರೀದಿಸುವವರು ಹೇಳಿಸಿಕೊಂಡು ಪಾರದರ್ಶಕತೆ ಕಡಿಮೆ ಇರುವ ಟಿಂಟ್ ಹಾಕಿಸುತ್ತಾರೆ. ಮತ್ತೆ ಕೆಲವರು ಖರೀದಿಯ ಬಳಿಕ ಫಿಲ್ಮ್ ಶೀಟ್ ಮಾದರಿಯ ಟಿಂಟ್ ಹೆಚ್ಚುವರಿಯಾಗಿ ಅಳವಡಿಸುತ್ತಾರೆ. ಇದು ನಿಯಮ ಬಾಹಿರವಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ನಿಯಮ ಪಾಲನೆ ಮಾಡಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.