ಫೆಲೆಸ್ತೀನ್ ಸಂಸದೆ ಖಲೀದಾ ಜರಾರ್ ಬಿಡುಗಡೆ

Update: 2021-09-27 16:35 GMT
photo: twitter.com/PalRes1948

ಜೆರುಸಲೇಂ, ಸೆ.27: ಇಸ್ರೇಲ್ ನ ಜೈಲಿನಲ್ಲಿ ಸುಮಾರು 2 ವರ್ಷ ಬಂಧನದಲ್ಲಿದ್ದ ಪೆಲೆಸ್ತೀನ್ ಸಂಸದೆ ಖಲೀದಾ ಜರಾರ್ ರನ್ನು ರವಿವಾರ ಜೈಲಿನಿಂದ ಬಿಡುಗಡೆಗೊಳಿಲಾಗಿದೆ ಎಂದು ಮೂಲಗಳು ಹೇಳಿವೆ.

ಈಗ ನಿಷ್ಕ್ರಿಯವಾಗಿರುವ ಪೆಲೆಸ್ತೀನ್ ಲೆಜಿಸ್ಲೇಟಿವ್ ಕೌನ್ಸಿಲ್ನ ಸದಸ್ಯೆಯಾಗಿರುವ ಎಡಪಂಥೀಯ ನಾಯಕಿ 58 ವರ್ಷದ ಜರಾರ್ ರನ್ನು ರವಿವಾರ ಮಧ್ಯಾಹ್ನ ಜೆನಿನ್ ನಗರದ ಪಶ್ಚಿಮದ ಸಲೇಂ ಚೆಕ್ಪಾಯಿಂಟ್ನಲ್ಲಿ ಇಸ್ರೇಲ್ಅಧಿಕಾರಿಗಳು ಬಿಡುಗಡೆಗೊಳಿಸಿದರು.
2019ರ ಅಕ್ಟೋಬರ್ 31ರಂದು ಜರಾರ್ ರನ್ನು ರಮಲ್ಲಾದ ಅವರ ಮನೆಯಿಂದ ಇಸ್ರೇಲ್ ಸೇನೆ ಬಂಧಿಸಿತ್ತು. 

ಕಳೆದ ಜುಲೈಯಲ್ಲಿ ಜರಾರ್ರ ಇಬ್ಬರು ಪುತ್ರಿಯರಲ್ಲಿ 31 ವರ್ಷದ ಸುಹಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪುತ್ರಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಜರಾರ್ಗೆ ಅವಕಾಶ ನೀಡಬೇಕೆಂಬ ವ್ಯಾಪಕ ಆಗ್ರಹ ಮತ್ತು ಕೋರಿಕೆಯನ್ನು ಇಸ್ರೇಲ್ ತಿರಸ್ಕರಿಸಿತ್ತು. ರವಿವಾರ ಬಿಡುಗಡೆಗೊಂಡ ತಕ್ಷಣ ಜರಾರ್, ಪುತ್ರಿಯ ಅಂತ್ಯಸಂಸ್ಕಾರ ನಡೆಸಿದ್ದ ರಮಲ್ಲಾ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭ ಪಿಎಫ್ಎಲ್ಪಿ ಪಕ್ಷದ ಕಾರ್ಯಕರ್ತರು, ಮುಖಂಡರು, ಪೆಲೆಸ್ತೀನಿಯನ್ ಪ್ರಿಸನರ್ಸ್ ಕ್ಲಬ್ನ ಮುಖ್ಯಸ್ಥ ಖದೂರ ಫಾರಿಸ್, ರಮಲ್ಲಾ ಮತ್ತು ಅಲ್-ಬಿರೆಹ್ ನಗರಗಳ ಗವರ್ನರ್ ಲಿಲಾ ಘನ್ಮಾನ್, ಹಲವು ಪತ್ರಕರ್ತರು ಜತೆಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ನನ್ನ ಪುತ್ರಿಯ ಅಂತಿಮ ದರ್ಶನಕ್ಕೆ, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲೂ ಅವರು ಅವಕಾಶ ನೀಡಲಿಲ್ಲ. 2019ರಲ್ಲಿ ನನ್ನನ್ನು ಬಂಧಿಸಿದ ಸಂದರ್ಭ ಪುತ್ರಿ ಸುಹಾಳನ್ನು ಅಂತಿಮ ಬಾರಿ ಆಲಿಂಗಿಸಿಕೊಂಡೆ’ ಎಂದು ಜರಾರ್ ಕಣ್ಣೀರು ಹಾಕಿದರು. ಇದು ಅತ್ಯಂತ ನೋವಿನ ಸನ್ನಿವೇಶವಾಗಿತ್ತು. ಆದರೆ, ಕಡೆಗೂ ಜರಾರ ಆಕ್ರಮಣಕಾರರ ಸೆರೆಮನೆಯಿಂದ ಬಿಡುಗಡೆಗೊಂಡಿರುವುದು ಸಂತೋಷ ತಂದಿದೆ ಎಂದು ಪಿಎಫ್ಎಲ್ಪಿಯ ಹಿರಿಯನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
 
ನೇರ, ನಿಷ್ಟುರವಾಗಿ ಮಾತನಾಡುವ ಮತ್ತು ಸಕ್ರಿಯ ರಾಜಕಾರಣಿ ಜರಾರ ಇಸ್ರೇಲ್ನ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ 6 ವರ್ಷಗಳಲ್ಲಿ ಬಹುತೇಕ ಸಮಯವನ್ನು ಅವರು ಇಸೇಲ್ನ ಸೆರೆಮನೆಯಲ್ಲೇ ಕಳೆದಿದ್ದಾರೆ. 2017ರ ಜುಲೈಯಿಂದ 2019ರ ಫೆಬ್ರವರಿವರೆಗೆ ಅವರನ್ನು ಇಸ್ರೇಲ್ನಲ್ಲಿ ಆಡಳಿತಾತ್ಮಕ ಬಂಧನದಲ್ಲಿಡಲಾಗಿತ್ತು. ಗುಪ್ತ ಮಾಹಿತಿಯ ಮೇರೆಗೆ ಪೆಲೆಸ್ತೀನ್ ವ್ಯಕ್ತಿಗಳನ್ನು ಯಾವುದೇ ಪ್ರಕರಣ ದಾಖಲಿಸದೆ ಅಥವಾ ವಿಚಾರಣೆಗೆ ಒಳಪಡಿಸದೆ ಅನಿರ್ಧಿಷ್ಟಾವಧಿಗೆ ಬಂಧನದಲ್ಲಿಡಲು ಇಸ್ರೇಲ್ಗೆಈ ಕಾನೂನು ಅವಕಾಶ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News