ಬೊಕ್ಕಪಟ್ನ- ಬೋಳೂರಿನಿಂದ ಕಂಕನಾಡಿ ರೈಲ್ವೇ ನಿಲ್ದಾಣದ ವರೆಗೆ ನೂತನ ಸರಕಾರಿ ಸಿಟಿ ಬಸ್ ಸೇವೆಗೆ ಚಾಲನೆ
ಮಂಗಳೂರು: ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೊಕ್ಕಪಟ್ನ-ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಅಮೃತಾನಂದಮಯಿ ಆಶ್ರಮದ ಮೂಲಕವಾಗಿ ಕಂಕನಾಡಿ ರೈಲ್ವೇ ಸ್ಟೇಷನ್ ವರೆಗೆ ಮತ್ತು ಅಲ್ಲಿಂದ ವಾಪಸು ಬೋಳೂರು ಸುಲ್ತಾನ್ ಬತ್ತೇರಿ - ಬೊಕ್ಕಪಟ್ನದ ವರೆಗೆ ಸರಕಾರಿ ಸಿಟಿ ಬಸ್ ಸೇವೆಗೆ ಇಂದು ಚಾಲನೆ ನೀಡಲಾಯಿತು.
ಶಾಸಕರಾದ ವೇದವ್ಯಾಸ ಕಾಮತ್ ಚಾಲನೆ ನೀಡಿ, ಸ್ಥಳೀಯ ಸಾರ್ವಜನಿಕರು ಬಹಳ ಕಾಲದಿಂದಲೂ ಇಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸಲ್ಲಿಸುತ್ತಿದ್ದರು. ಇಲ್ಲಿನ ಜನರ ಭಾವನೆಗಳಿಗನುಗುಣವಾಗಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಮಂಗಳೂರು ಭೇಟಿಯ ಸಂದರ್ಭದಲ್ಲಿ ಅಮ್ಮನವರು ಇಲ್ಲಿ ಸಾರಿಗೆ ಸೌಲಭ್ಯ ಅಭಿವೃದ್ಧಿ ಮಾಡಬೇಕಾಗಿ ತಿಳಿಸಿದ್ದರು. ಅಮ್ಮನವರ ಸಂಕಲ್ಪದಂತೆ ಇಂದು ಅವರ 68 ನೆಯ ಜನ್ಮದಿನಾಚರಣೆಯಂದು ಈ ಸೇವೆ ಆರಂಭಗೊಳ್ಳುತ್ತಿರುವುದು ವಿಶೇಷ ಎಂದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತ ಕುಮಾರ್ ಪೆರ್ಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶ್ರೀ ಅರುಣ ಎಸ್.ಎನ್., ವಿಭಾಗೀಯ ನಿಯಂತ್ರಣಾಧಿಕಾರಿ, ಕೆ ಎಸ್ ಆರ್ ಟಿ ಸಿ, ಮಂಗಳೂರು ವಿಭಾಗ ಇವರು ಸ್ವಾಗತಿದರು. ಕೃಷ್ಣ ಶೆಟ್ಟಿ ವಂದಿಸಿದರು. ಡಾ.ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ, ಆಡಳಿತ ನಿರ್ದೇಶಕರು. ಎಸ್.ಸಿ.ಎಸ್ ಆಸ್ಪತ್ರೆ , ಮಂಗಳೂರು, ಮಾಜಿ ಮೇಯರ್ ದಿವಾಕರ್, ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ಮಂಗಳೂರು, ಪ್ರಸಾದ್ ರಾಜ್ ಕಾಂಚನ್, ಸುರೇಶ್ ಅಮೀನ್, ಮುರಳೀಧರ್ ಶೆಟ್ಟಿ, ಪಂಕಜ್ ವಸಾನಿ, ಆರ್.ಟಿ.ಓ ವರ್ಣೇಕರ್ ಬೋಳೂರು ಮೊಗವೀರ ಸಭಾದ ಪ್ರತಿನಿಧಿಗಳು, ರಾಹುಲ್ ಶೆಟ್ಟಿ, ಯೋಗೀಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.