×
Ad

ಭಟ್ಕಳ: ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ

Update: 2021-09-27 22:52 IST

ಭಟ್ಕಳ: ಇಂದು ನಡೆದ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿರುವ ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗರದ ಹೃದಯ ಭಾಗದಲ್ಲಿರುವ ಶಮ್ಸುದ್ದೀನ್ ವೃತ್ತದಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಹೆದ್ದಾರಿ ತಡೆದು ವಾಹನಗಳು ಸಂಚರಿಸದಂತೆ ತಡೆದರು. ಇದರಿಂದ ಕೆಲಸಮಯ ಟ್ರಾಫಿಕ್ ಜಾಮ್ ಆಯಿತು. ಸ್ಥಳಕ್ಕಾಗಮಿಸಿದ ಸಿಪಿಐ ದಿವಾಕರ ಪ್ರತಿಭಟನಾಕಾರರ ಮನವೊಲಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಕೇಂದ್ರ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮೂಲಕ ರೈತರ ಭೂಮಿ ಕಸಿಯುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಶಾಲೆ ಮಕ್ಕಳಿಂದ ಮಹಿಳೆಯರ ತನಕ ನಿರಂತರ ಅತ್ಯಾಚಾರ ನಡೆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾದರೂ ಕೇಂದ್ರ ಪ್ರತಿದಿವಸ ತೈಲಬೆಲೆ ಏರಿಸಿ ಸಾಮಾನ್ಯ ನಾಗರಿಕನಿಗೆ ದಿನನಿತ್ಯ ಜೀವನ ಹೊರೆ ಆಗುವ ಹಾಗೆ ಮಾಡಿದೆ. ಸರ್ಕಾರ ಈ ಕೂಡಲೇ ಕೃಷಿ ಕಾಯ್ದೆ ಹಿಂಪಡೆಯಬೇಕು ಮತ್ತು ತೈಲ ಬೆಲೆ ಇಳಿಸಿ ಸಾಮಾನ್ಯ ಜನರ ನಿರ್ವಹಣೆ ಬೇಕಾಗುವ ದಿನನಿತ್ಯ ವಸ್ತುಗಳ ಬೆಲೆ ಇಳಿಸಬೇಕು. ಇಲ್ಲದೇ ಹೋದಲ್ಲಿ ಸಾಮಾನ್ಯ ನಾಗರಿಕನೂ ಬೀದಿಗಿಳಿದು ಹೋರಾಟ ಮಾಡುವ ದಿನ ದೂರವಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಬ್ದುಲ್ ಮಜೀದ್, ಮೀನುಗಾರ ಮುಖಂಡ ರಾಮ ಮೊಗೇರ ಮಾತನಾಡಿದರು, ಮಾಜಿ ಶಾಸಕ ಜೆ.ಡಿ.ನಾಯ್ಕ, ಜಿ.ಪಂ ಸದಸ್ಯರಾದ ಅಲ್ಬರ್ಟ್ ಡಿಕೋಸ್ತಾ, ಸಿಂಧೂ ಭಾಸ್ಕರ, ವೆಂಕಟೇಶ ನಾಯ್ಕ, ಸುರೇಶ ನಾಯ್ಕ, ಮಹಾಬಲೇಶ್ವರ ನಾಯ್ಕ, ವಿಷ್ಣು ದೇವಾಡಿಗ, ಮಟ್ಟಾ ಸಾಧಿಕ್ ಸೇರಿ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News