×
Ad

ಬ್ಯಾರಿ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಲು ರಹೀಂ ಉಚ್ಚಿಲ್ ಮನವಿ

Update: 2021-09-27 23:04 IST

ಮಂಗಳೂರು, ಸೆ.27: ಸಾವಿರಾರು ವರ್ಷದ ಇತಿಹಾಸವಿರುವ ಲಿಪಿ ಹಾಗೂ ಕ್ಯಾಲೆಂಡರನ್ನು ಹೊಂದಿರುವ ಬ್ಯಾರಿ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಿ ರಾಜ್ಯ ಭಾಷಾ ಮಾನ್ಯತೆಯನ್ನು ನೀಡಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮುಖ್ಯಮತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಿಗೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸುನೀಲ್ ಕುಮಾರ್‌ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಿ ರಾಜ್ಯ ಭಾಷಾ ಸ್ಥಾನಮಾನ ನೀಡುವ ರವರು ಭರವಸೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿ ಸುಮಾರು 20 ಲಕ್ಷ ಮಂದಿ ಬ್ಯಾರಿ ಭಾಷೆಯನ್ನು ಮಾತೃ ಭಾಷೆಯಾಗಿಸಿಕೊಂಡಿದ್ದಾರೆ. ಬ್ಯಾರಿ ಭಾಷೆಯಲ್ಲಿ ಶಬ್ದಕೋಶ, ಬ್ಯಾರಿ ವ್ಯಾಕರಣ ಗ್ರಂಥ, ಕಥೆ, ಕಾದಂಬರಿ ಕವನ ಸಂಕಲನಗಳು ಪ್ರಕಟಗೊಂಡಿದೆ. ರಾಷ್ಟ್ರ ಪ್ರಶಸ್ತಿಯು ಈ ಭಾಷೆಯ ಸಿನೆಮಾಕ್ಕೆ ಬಂದಿರುತ್ತದೆ. ಬ್ಯಾರಿ ಜನಾಂಗದ ದಫ್, ಕೋಲ್ಕಲಿ, ಒಪ್ಪನೆ ಮುಂತಾದ ಕಲಾ ಪ್ರಕಾರಗಳನ್ನು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಡಿಪ್ಲೊಮಾ ಸರ್ಟಿಫಿಕೆಟ್ ಕೋರ್ಸ್‌ಗಳಾಗಿ ಹೊರ ಹೊಮ್ಮಿದೆ. ಹಾಗಾಗಿ ರಾಜ್ಯ ಭಾಷಾ ಸ್ಥಾನಮಾನ ಹಾಗೂ 8ನೇ ಪರಿಚ್ಚೇದಕ್ಕೆ ಸೇರಿಸುವ ಎಲ್ಲಾ ಅರ್ಹತೆಯನ್ನು ಬ್ಯಾರಿ ಭಾಷೆ ಹೊಂದಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ಬ್ಯಾರಿ ಸಮುದಾಯದ ಮತವನ್ನು ಪಡೆದು ಆಯ್ಕೆಯಾದಂತಹ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಬಿಎಂ ಫಾರೂಕ್, ಸಿಎಂ ಇಬ್ರಾಹಿಂ ಮತ್ತಿತರ ಕಾಂಗ್ರೆಸ್ ಹಾಗೂ ಜೆಡಿಎಸ್ ಜನಪ್ರತಿನಿಧಿಗಳು ಈ ಕುರಿತು ಸದನದಲ್ಲಿ ಯಾವುದೇ ದ್ವನಿಯೆತ್ತದೆ ಓಲೈಕೆ ರಾಜಕೀಯ ಮಾಡುತ್ತಿರುವುದು ಖೇದಕರ ಎಂದು ಅಭಿಪ್ರಾಯಪಟ್ಟ ರಹೀಂ ಉಚ್ಚಿಲ್ ಬಿಜೆಪಿ ಸರಕಾರ ಬ್ಯಾರಿಗಳ ಎಲ್ಲಾ ಬೇಡಿಕೆಗಳನ್ನು ಯಾವುದೇ ತುಷ್ಠೀಕರಣ ನೀತಿಗೆ ಒಳಗಾಗದೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News