ಪುರಾವೆ ಇಲ್ಲದೆ ಮತಾಂತರದ ಬಗ್ಗೆ ಸುಳ್ಳು ಆರೋಪ: ಭಾರತೀಯ ಕ್ರೈಸ್ತ ಒಕ್ಕೂಟ
ಉಡುಪಿ, ಸೆ.28: ರಾಜ್ಯದಲ್ಲಿ ಕೆಲವೊಂದು ಸಂಘಟನೆಗಳು ಕ್ರೈಸ್ತರ ವಿರುದ್ಧ ಮತಾಂತರದ ಆರೋಪವನ್ನು ಹೊರಿಸುತ್ತಿದೆ. ಯಾವುದೇ ಪುರಾವೆ ಇಲ್ಲದೆ ಸುಳ್ಳು ಆರೋಪಗಳನ್ನು ಮಾಡಿ ಸಮಾಜದಲ್ಲಿ ದ್ವೇಷದ ವಿಷ ಬೀಜವನ್ನು ಬಿತ್ತುವ ಹುನ್ನಾರವನ್ನು ಮಾಡಲಾಗುತ್ತಿದೆ. ಕ್ರೈಸ್ತ ಸಮುದಾಯ ಎಂದಿಗೂ ಆಮಿಷ ಹಾಗೂ ಬಲವಂತದ ಮತಾಂತರವನ್ನು ವಿರೋಧಿಸುತ್ತದೆ ಎಂದು ಭಾರತೀಯ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟ ತಿಳಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಇತ್ತೀಚೆಗೆ ಕಾರ್ಕಳದಲ್ಲಿ ಕೆಲವೊಂದು ಸಂಘಟನೆಗಳು ಮತಾಂತರದ ಸುಳ್ಳು ಆರೋಪ ಹೊರಿಸಿ ಪ್ರಾರ್ಥನಾ ಮಂದಿರಗಳಿಗೆ ಅಕ್ರಮ ಪ್ರವೇಶ ಮಾಡಿ ಪ್ರಾರ್ಥನೆಗೆ ಬಂದವರ ಮೇಲೆ ಹಲ್ಲೆ ಮಾಡಿವೆ. ಈ ದಾಳಿ ಮತ್ತು ಕಾನೂನುಬಾಹಿರ ಕೃತ್ಯವನ್ನು ನಾವೇ ಮಾಡಿರುವುದಾಗಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದರೂ ಪೊಲೀಸ್ ಇಲಾಖೆ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದೆ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಕ್ರೈಸ್ತ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳಲ್ಲಿಯೂ ಮತಾಂತರ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣ ಹಾಗೂ ಕೆಲವೊಂದು ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ. ಈ ಆಧಾರರಹಿತ ಆರೋಪದಿಂದ ಕ್ರೈಸ್ತರ ಭಾವನೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಈ ಮೂಲಕ ಧರ್ಮಧರ್ಮ ಗಳ ಮಧ್ಯೆ ಗೋಡೆ ನಿರ್ಮಿಸಲು ಕಾರ್ಯವನ್ನು ಕೆಲವು ಸಂಘಟನೆಗಳು ಮಾಡುತ್ತಿವೆ. ಈ ರೀತಿ ಸುಳ್ಳು ಹರಡುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಇಫ್ಕಾ ಜಿಲ್ಲಾಧ್ಯಕ್ಷ ಡಾ.ನೇರಿ ಕರ್ನೆಲಿಯೋ, ಗೌರವಾಧ್ಯಕ್ಷ ಲೂವಿಸ್ ಲೋಬೊ, ರೋಬರ್ಟ್ ಮಿನೇಜಸ್, ಒಕ್ಕೂಟದ ಕಾರ್ಯದರ್ಶಿ ಪೀಟರ್ ದಾಂತಿ, ಸಂಯೋಜಕ ಗ್ಲಾಡ್ಸನ್ ಕರ್ಕಡ, ಥೋಮಸ್ ಸುವರೀಸ್ ಮೊದಲಾದವರು ಉಪಸ್ಥಿತರಿದ್ದರು.
ಮತಾಂತರ ಕಾಯ್ದೆಗೆ ವಿರೋಧ
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸದನದಲ್ಲಿ ಇತ್ತೀಚೆಗೆ ತನ್ನ ತಾಯಿ ಮತಾಂತರ ಆಗಿದ್ದಾರೆ ಎಂದು ಮಾಡಿರುವ ಆರೋಪದ ಹಿಂದೆ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಹುನ್ನಾರ ಅಡಗಿದೆ. ಮತಾಂತರ ಕಾಯ್ದೆ ಜಾರಿಗೆ ಬಂದರೆ ಮುಂದೆ ಅದನ್ನು ದುರುಪಯೋಗಪಡಿಸಿಕೊಂಡು ಕ್ರೈಸ್ತರ ವಿರುದ್ಧ ಸುಳ್ಳು ದೂರು ನೀಡುವ ಸಾಧ್ಯತೆಗಳಿವೆ. ಆದುದರಿಂದ ಸರಕಾರ ಆ ಕಾಯ್ದೆ ಜಾರಿಗೆ ತರುವುದಕ್ಕೆ ನಮ್ಮ ವಿರೋಧ ಇದೆ ಎಂದು ಪ್ರಶಾಂತ್ ಜತ್ತನ್ನ ತಿಳಿಸಿದರು.
ಇತ್ತೀಚೆಗೆ ಕೆಲವು ಸಂಘಟನೆಯವರು ದಾಳಿ ಮಾಡಿರುವ ಕಾರ್ಕಳದ ಪ್ರಾರ್ಥನ ಮಂದಿರಕ್ಕೆ ಬರುವವರನ್ನು ಮಾತನಾಡಿಸಿದಾಗ ಅವರು ಎಲ್ಲರೂ ನಮ್ಮನ್ನು ಇಲ್ಲಿಗೆ ಬರುವಂತೆ ಯಾರು ಕೂಡ ಒತ್ತಾಯ ಮಾಡಿಲ್ಲ ಎಂದು ಹೇಳಿದ್ದಾರೆ. ಅವರು ನೆಮ್ಮದಿ ಕಂಡುಕೊಳ್ಳಲು ಬರುತ್ತಿದ್ದಾರೆಯೇ ಹೊರತು ಮತಾಂತರ ಆಗಲು ಅಲ್ಲ. ಹಾಗೇ ಹರೇ ರಾಮ್ ಹರೇ ಕೃಷ್ಣದಲ್ಲಿ ಶೇ.60ರಷ್ಟು ಮಂದಿ ಕ್ರೈಸ್ತರಿದ್ದಾರೆ. ನಾವು ಎಲ್ಲೂ ಅದಕ್ಕೆ ವಿರೋಧ ಮಾಡಿಲ್ಲ. ಯಾರಿಗೆ ಎಲ್ಲಿ ನೆಮ್ಮದಿ ಸಿಗುತ್ತದೆ, ಅಲ್ಲಿಗೆ ಹೋಗಬಹುದು ಎಂದರು.