ತಾರತಮ್ಯವಿಲ್ಲದೆ ಅನುದಾನ ನೀಡಲು ಕಲಾ ಸಂಸ್ಥೆಗಳ ಪ್ರತಿನಿಧಿಗಳ ಆಗ್ರಹ
ಮಂಗಳೂರು, ಸೆ.28: ಅರ್ಹ ಸಂಘಸಂಸ್ಥೆಗಳಿಗೆ ತಾರತಮ್ಯರಹಿತವಾಗಿ ವಾರ್ಷಿಕ ಅನುದಾನ ನೀಡುವ ಮೂಲಕ ಕಲಾ ಸಂಸ್ಥೆಗಳನ್ನು ಪೋಷಿಸಬೇಕು ಎಂದು ಮಂಗಳೂರಿನ ನೋಂದಾಯಿತ ಕಲಾ ಸಂಸ್ಥೆಗಳು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರನ್ನು ಆಗ್ರಹಿಸಿವೆ.
ಕಳೆದ ಸಾಲಿನಲ್ಲಿ ಮಂಗಳೂರು ಸೇರಿದಂತೆ ಹೆಚ್ಚಿನ ಸಂಘಸಂಸ್ಥೆಗಳಿಗೆ ವಾರ್ಷಿಕ ಅನುದಾನ ನೀಡದೆ ಇಲಾಖೆ ತಾರತಮ್ಯ ಎಸಗಿದೆ. ಈ ಬಗ್ಗೆ ಇಲಾಖೆಯ ನಿರ್ದೇಶಕರನ್ನು ಸಂಪರ್ಕಿಸಿದಾಗ ಅವರು ಹಾರಿಕೆ ಉತ್ತರ ನೀಡಿದ್ದಾರೆ. ಇದರಿಂದ ಲಕ್ಷಾಂತರ ರೂ. ವೆಚ್ಚ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ ಸಂಘಸಂಸ್ಥೆಗಳಿಗೆ ನಷ್ಟ ಉಂಟಾಗಿದೆ ಎಂದು ಮಣಿ ಕೃಷ್ಣಸ್ವಾಮಿ ಅಕಾಡಮಿ ಅಧ್ಯಕ್ಷ ಪಿ.ನಿತ್ಯಾನಂದ ರಾವ್ ಸುದ್ದಿಗೋಷ್ಠಿಯಲ್ಲಿ ಇಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರದ ಬಗ್ಗೆ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅನುದಾನ ಸಿಗದ ಅರ್ಹ ಸಂಘಸಂಸ್ಥೆಗಳಿಗೆ ಇನ್ನೊಂದು ಹಂತದಲ್ಲಿ ಅನುದಾನ ನೀಡಲು ಸಾಧ್ಯವೇ ಎಂಬುದನ್ನು ಪುನರ್ ಪರಿಶೀಲಿಸಬೇಕು. ಇಲ್ಲವೇ ಹೊಸದಾಗಿ ಈ ಬಾರಿ ನವೆಂಬರ್ ಒಳಗೆ ಅನುದಾನಕ್ಕೆ ಅರ್ಜಿ ಆಹ್ವಾನಿಸಬೇಕು. ಡಿಸೆಂಬರ್‌ನಲ್ಲಿ ಅನುದಾನ ಬಿಡುಗಡೆ ಮಾಡಿದರೆ ಸಾಧ್ಯವಾದಷ್ಟು ಕಾರ್ಯಯೋಜನೆ ಹಾಕಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಅರ್ಜಿ ಸಲ್ಲಿಕೆ ಸರಳೀಕೃತಗೊಳಿಸಿ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನ್ನು ಮೇಲ್ದರ್ಜೆಗೆ ಏರಿಸಬೇಕು. ಇಲಾಖಾ ಕಾರ್ಯಕ್ರಮ ಹಾಗೂ ಅನುದಾನಕ್ಕೆ ಅರ್ಜಿ ಸಲ್ಲಿಸುವುದನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು. ಅರ್ಜಿ ಸಲ್ಲಿಕೆ ಬಳಿಕ ಅಥವಾ ಅನುದಾನ ಬಿಡುಗಡೆ ಬಳಿಕ ಅದು ಯಾವ ಹಂತದಲ್ಲಿ ಇದೆ ಎಂಬ ಮಾಹಿತಿ ಕಾಲಕಾಲಕ್ಕೆ ವೆಬ್ ಮೂಲಕ ಅರ್ಜಿದಾರರಿಗೆ ಗೊತ್ತಾಗುವಂತಾಗಬೇಕು. ಸಣ್ಣಪುಟ್ಟ ತಪ್ಪುಗಳಿದ್ದರೆ ಅರ್ಜಿಯನ್ನು ಸಾರಾಸಾಗಟವಾಗಿ ತಿರಸ್ಕರಿಸದೆ, ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ಆದರೆ ಸುಳ್ಳು ದಾಖಲೆ ಪತ್ರ ನೀಡಿದವರ ಅರ್ಜಿ ತಿರಸ್ಕರಿಸುವ ಜೊತೆಗೆ ಅಂತಹ ಸಂಘ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ವಿಭಾಗೀಯ ಕಚೇರಿ ತೆರೆದು ಜಂಟಿ ಆಯುಕ್ತರ ನೇಮಕ ಮಾಡಿರುವುದರಿಂದ ಇಲಾಖೆಯ ಹೆಚ್ಚಿನ ಕೆಲಸಗಳು ವಿಕೇಂದ್ರೀಕೃತವಾಗಿ ಸುಲಭವಾಗಿ ನೆರವೇರಲು ಸಾಧ್ಯವಾಗಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಆಗುಹೋಗುಗಳಿಗೆ ಬೆಂಬಲವಾಗಿ ನಿಲ್ಲುವಂತೆ ಜಿಲ್ಲೆಯ ಎಲ್ಲ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಜಿಲ್ಲೆಯ ಎಲ್ಲ ಕಲಾ ಸಂಘಟನೆಗಳೂ ಸಚಿವರಿಗೆ ಬೆಂಗಾವಲಾಗಿ ನೆರವು ನೀಡಲಿವೆ ಎಂದರು.
ಅರ್ಹ ಸಂಘಸಂಸ್ಥೆಗಳಿಗೇ ಅನುದಾನ ಖೋತಾ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯ ಬಜೆಟ್‌ನಲ್ಲಿ ವಾರ್ಷಿಕ 300 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 12 ಕೋಟಿ ರೂ. ಮೊತ್ತವನ್ನು ಅರ್ಹ ಸಂಘಸಂಸ್ಥೆಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಇಲಾಖೆ ಅಧಿಕಾರಿಗಳು ಆಯ್ಕೆ ಮಾಡಿದ್ದು ಕೇವಲ ಎರಡು ಸಾವಿರ ಅರ್ಜಿಗಳನ್ನು ಮಾತ್ರ. ಅದು ಕೂಡ ಬಹುತೇಕ ಸಂಘಸಂಸ್ಥೆಗಳು ಈ ಹಿಂದೆ ಕಾರ್ಯಕ್ರಮವನ್ನೇ ನಡೆಸಿರಲಿಲ್ಲ, ಇಲ್ಲವೇ ಬೆರಳೆಣಿಕೆ ಕಾರ್ಯಕ್ರಮ ಸಂಘಟಿಸಿವೆ. ಇಲ್ಲಿ ನಮ್ಮ ಸಂಘಸಂಸ್ಥೆಗಳೂ ಸೇರಿದಂತೆ ಕೆಲವು ವರ್ಷಗಳಿಂದ ಅನುದಾನ ಪಡೆಯುತ್ತಿರುವ ಸಂಘಸಂಸ್ಥೆಗಳನ್ನು ಅನುದಾನದಿಂದ ಹಠಾತ್ ಕೈಬಿಡಲಾಗಿದೆ. ಯಾವ ಮಾನದಂಡದಲ್ಲಿ ಕೈಬಿಡಲಾಗಿದೆ ಎಂದು ಪ್ರಶ್ನಿಸಿದರೆ, ಇಲಾಖೆಯ ನಿರ್ದೇಶಕರಿಂದ ಸರಿಯಾದ ಉತ್ತರ ಸಿಗುತ್ತಿಲ್ಲ. ಇದನ್ನು ಇಲಾಖೆಯ ಸಚಿವರ ಗಮನಕ್ಕೂ ತರಲಾಗಿದೆ ಎಂದು ಶ್ರೀಧರ ಹೊಳ್ಳ ತಿಳಿಸಿದರು.
ಭರತಾಂಜಲಿ ಸಂಸ್ಥೆ ನಿರ್ದೇಶಕ ಶ್ರೀಧರ ಹೊಳ್ಳ, ನಾಟ್ಯಾಂಜಲಿ ಕಲಾ ಅಕಾಡಮಿ ನಿರ್ದೇಶಕ ಚಂದ್ರಶೇಖರ ನಾವಡ, ಗಾನನೃತ್ಯ ಅಕಾಡಮಿ ನಿರ್ದೇಶಕ ರಾಧಾಕೃಷ್ಣ ಭಟ್, ಸೌರಭ ಕಲಾ ಪರಿಷತ್ ನಿರ್ದೇಶಕಿ ಡಾ. ಶ್ರೀವಿದ್ಯಾ ಮುರಳೀಧರ್ ಉಪಸ್ಥಿತರಿದ್ದರು.