"ಅಮೆರಿಕಾಗಿಂತ ಭಾರತೀಯ ಮಾಧ್ಯಮ ಉತ್ತಮ ನಡವಳಿಕೆ ಹೊಂದಿದೆ" ಎಂಬ ಬೈಡೆನ್ ಹೇಳಿಕೆ ಸಮರ್ಥಿಸಿದ ಶ್ವೇತಭವನ
ವಾಷಿಂಗ್ಟನ್: ಅಮೆರಿಕಾದ ಮಾಧ್ಯಮಕ್ಕಿಂತ ಭಾರತದ ಮಾಧ್ಯಮವು ಉತ್ತಮ ನಡವಳಿಕೆ ತೋರುತ್ತದೆ ಎಂದು ಇತ್ತೀಚೆಗೆ ಭಾರತದ ಪ್ರಧಾನಿ ಜತೆಗಿನ ಭೇಟಿ ಸಂದರ್ಭ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿರುವುದು ಅಮೆರಿಕಾದ ಮಾಧ್ಯಮ ಮಂದಿಗೆ ಹಿಡಿಸಿಲ್ಲ. ಆದರೆ ಬೈಡೆನ್ ಅವರ ಹೇಳಿಕೆಯನ್ನು ಸಮರ್ಥಿಸಿರುವ ಶ್ವೇತಭವನ ಅದೇ ಸಮಯ, ಅಧ್ಯಕ್ಷರ ಹೇಳಿಕೆಯು ಅಮೆರಿಕಾದ ಮಾಧ್ಯಮದ ಮೇಲಿನ ವಾಗ್ದಾಳಿಯಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತದ ಪ್ರಧಾನಿ ಜತೆಗಿನ ಭೇಟಿ ಸಂದರ್ಭ ಭಾರತದ ಮಾದ್ಯಮವನ್ನು ಹೊಗಳಿದ್ದ ಬೈಡೆನ್ ಅದೇ ಸಮಯ ವಿದೇಶಿ ಸರಕಾರಗಳ ಮುಖ್ಯಸ್ಥರ ಎದುರಿಗೆ ಸಂದರ್ಭಕ್ಕೆ ತಕ್ಕುದಲ್ಲದ ಪ್ರಶ್ನೆಗಳನ್ನು ಕೇಳುವ ಅಮೆರಿಕಾದ ಮಾಧ್ಯಮ ಮಂದಿಯ ಮೇಲೆ ಕಿಡಿಕಾರಿದ್ದರು.
ಬೈಡೆನ್ ಅವರ ಹೇಳಿಕೆ ಕುರಿತು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಪ್ಸಕಿ ಅವರು ಸೋಮವಾರ ಮಾಧ್ಯಮ ಮಂದಿಯಿಂದ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜೆನ್ "ಇಂದು ಅವರು ಕೋವಿಡ್ ಲಸಿಕೆಗಳ ಕುರಿತು ಮಾತನಾಡಬಯಸಿದ್ದರೆ, ಕೆಲ ಪ್ರಶ್ನೆಗಳು ಅದೇ ವಿಚಾರಕ್ಕೆ ಸಂಬಂಧಿಸಿದ್ದರೆ ಕೆಲವು ಸಂದರ್ಭ ಅವರು ಮಾತನಾಡಲು ಬಯಸುವ ವಿಷಯದ ಹೊರತಾಗಿ ಬೇರೆ ವಿಷಯಗಳ ಪ್ರಶ್ನೆಗಳಿರುತ್ತವೆ" ಎಂದು ಹೇಳಿದರು.
"ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತದ ಮಾಧ್ಯಮ ಜಗತ್ತಿನಲ್ಲಿ 142ನೇ ಸ್ಥಾನದಲ್ಲಿದೆ ಎಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ರ್ಯಾಂಕಿಂಗ್ ತಿಳಿಸುತ್ತದೆ, ಹೀಗಿರುವಾಗ ಭಾರತೀಯ ಮಾಧ್ಯಮ ಮತ್ತು ಅಮೆರಿಕಾ ಮಾಧ್ಯಮವನ್ನು ಹೇಗೆ ಹೋಲಿಸಬಹುದು?" ಎಂದು ಒಬ್ಬ ಪತ್ರಕರ್ತರು ಕೇಳಿದಾಗ "ಈಗಿನ ಅಧ್ಯಕ್ಷರು 140ಕ್ಕೂ ಹೆಚ್ಚು ಬಾರಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಅವರು ಮಾಧ್ಯಮಗಳ ಪಾತ್ರವನ್ನು ಗೌರವಿಸುತ್ತಾರೆ" ಎಂದು ಜೆನ್ ಹೇಳಿದರು.