ಪಂಜಾಬ್ ನ ಮೂರನೆ ದಲಿತ ಡಿಜಿಪಿಯಾಗಿ ಇಕ್ಬಾಲ್ ಪ್ರೀತ್ ಸಿಂಗ್ ನೇಮಕ

Update: 2021-09-28 14:59 GMT
Photo: Punjab Police India

ಚಂಡೀಗಢ, ಸೆ.28: ಪಂಜಾಬ್ ನ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ದಲಿತ ಸಮುದಾಯದ ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ಅವರು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸ್ವಾತಂತ್ರ್ಯಾನಂತರ ಸುಮಾರು 40 ಡಿಜಿಪಿಗಳನ್ನು ಕಂಡಿರುವ ಪಂಜಾಬ್ ನಲ್ಲಿ ದಲಿತರೊಬ್ಬರು ಪೊಲೀಸ್ ಇಲಾಖೆಯ ವರಿಷ್ಠರಾಗುವುದು ಇದು ಮೂರನೆ ಸಲವಾಗಿದೆ. ಒಂದು ದಶಕಕ್ಕಿಂತಲೂ ಹಿಂದೆ, ಅಂದರೆ 2009ರಲ್ಲಿ ದಲಿತ ಸಮುದಾಯದವರೊಬ್ಬರು ಪಂಜಾಬ್ನ ಡಿಜಿಪಿಯಾಗಿ ನೇಮಕಗೊಂಡಿದ್ದರು. ಪಂಜಾಬ್ ನ ಪ್ರಪ್ರಥಮ ದಲಿತ ಮುಖ್ಯಮಂತ್ರಿಯಾಗಿ ಚರಣ್ಚಿತ್ ಸಿಂಗ್ ಚನ್ನಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳ ಆನಂತರ ಸಹೋಟಾ ಅವರು ಡಿಜಿಪಿಯಾಗಿ ನೇಮಕಗೊಂಡಿದ್ದಾರೆ.

ಆ ರಾಜ್ಯದ ಹಿಂದೆ ಸೇವೆ ಸಲ್ಲಿಸಿರುವ ಎಲ್ಲಾ ದಲಿತ ಡಿಜಿಪಿಗಳು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಗಷ್ಟೇ ಅಧಿಕಾರದಲ್ಲಿದ್ದರು. ಪಂಜಾಬ್ ನ ಕೊನೆಯ ದಲಿತ ಡಿಜಿಪಿ ಕಮಲ್ ಕೆ. ಅಟ್ರಿ 1971ನೇ ಸಾಲಿನ ಐಎಎಸ್ ಅಧಿಕಾರಿಯಾಗಿದ್ದು 2009ರಲ್ಲಿ ಅವರು ನಾಲ್ಕು ತಿಂಗಳುಗಳ ಕಾಲ ಪೊಲೀಸ್ ವರಿಷ್ಠರಾಗಿ ಕಾರ್ಯನಿರ್ವಹಿಸಿದ್ದರು. ಅವರಿಗಿಂತ ಮೊದಲು ಪಂಜಾಬ್ನ ಪ್ರಪ್ರಥಮ ದಲಿತ ಡಿಜಿಪಿ ಸುಬೇ ಸಿಂಗ್ ಅವರು 1996ರ ಜುಲೈ ಹಾಗೂ 1997ರ ಫೆಬ್ರವರಿ ಮಧ್ಯೆ ಸುಮಾರು ಎಂಟು ತಿಂಗಳುಗಳವರೆಗೆ ಸೇವೆ ಸಲ್ಲಿಸಿದ್ದರು.

ಪಂಜಾಬ್ ಸಶಸ್ತ್ರ ಪೊಲೀಸ್ ಪಡೆಯ ವಿಶೇಷ ಡಿಜಿಪಿಯಾಗಿದ್ದ ಸಹೋಟಾ ಅವರಿಗೆ ಪೊಲೀಸ್ ಡಿಜಿಪಿಯಾಗಿ ಕೇವಲ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. ಆದರೆ ಅವರ ಸೇವಾವಧಿಯು ಒಂದು ವರ್ಷಕ್ಕಿಂತಲೂ ಕಡಿಮೆಯಾಗಿದೆ.ಅವರು ಮುಂದಿನ ವರ್ಷದ ಆಗಸ್ಟ್ನಲ್ಲಿ ನಿವೃತ್ತರಾಗಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿಯ ಬದಲಾವಣೆಯಾದ ಬೆನ್ನಲ್ಲೇ ಹಾಲಿ ಡಿಜಿಪಿ ದಿನಕರ್ಗುಪ್ತಾ ಅವರನ್ನು ರಜೆಯ ಮೇಲೆ ತೆರಳುವಂತೆ ಸೂಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News