ಹೈಟಿ: ಚುನಾವಣೆ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ
ಪೋರ್ಟ್ ಆಫ್ ಪ್ರಿನ್ಸ್, ಸೆ.28: ಹೈಟಿಯಲ್ಲಿ ಚುನಾವಣಾ ಸಮಿತಿಯನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ನವೆಂಬರ್ 7ರಿಂದ ಆರಂಭಗೊಳ್ಳಬೇಕಿದ್ದ ಸಾರ್ವತ್ರಿಕ ಚುನಾವಣೆ ಮತ್ತು ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹಣೆ ಪ್ರಕ್ರಿಯೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿರುವುದಾಗಿ ವರದಿಯಾಗಿದೆ.
ಹಂಗಾಮಿ ಚುನಾವಣಾ ಸಮಿತಿ(ಸಿಇಪಿ)ಯನ್ನು ವಜಾಗೊಳಿಸಲಾಗಿದ್ದು ನೂತನ ಸಮಿತಿಯನ್ನು ನೇಮಿಸಲು ಸಿದ್ಧತೆ ನಡೆಯುತ್ತಿದೆ ಎಂದು ಹೈಟಿ ಅಧ್ಯಕ್ಷರಾಗಿದ್ದ ಜೊವೆನೆಲ್ ಮೋಯಿಸ್ ಹತ್ಯೆಯಾದ ಬಳಿಕ ದೇಶದ ಪ್ರಧಾನಿಯಾಗಿ ಆಯ್ಕೆಗೊಂಡ ಆರಿಯಲ್ ಹೆನ್ರಿ ಸೋಮವಾರ ಘೋಷಿಸಿದ್ದರು. ಅಧ್ಯಕ್ಷರ ಮತ್ತು ಸಂಸತ್ ಸದಸ್ಯರ ಆಯ್ಕೆಗೆ ಚುನಾವಣೆ ಹಾಗೂ ಸಾಂವಿಧಾನಿಕ ಜನಮತ ಸಂಗ್ರಹ ಪ್ರಕ್ರಿಯೆಯ ಪ್ರಥಮ ಹಂತ ನವೆಂಬರ್ 7ರಂದು, 2ನೇ ಹಂತದ ಚುನಾವಣೆ 2022ರ ಜನವರಿ 23ರಂದು ನಗರಪಾಲಿಕೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯ ಜತೆಗೇ ನಡೆಯಲಿದೆ ಎಂದು ಸಿಇಪಿ ಇತ್ತೀಚೆಗಷ್ಟೇ ಪ್ರಕಟಿಸಿತ್ತು.
ಇದೀಗ ಸಿಇಸಿಯನ್ನು ವಜಾಗೊಳಿಸಿರುವುದರಿಂದ ಹೈಟಿಯಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಮುಂದುವರಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.