×
Ad

ಕಾಬೂಲ್ ವಿವಿ: ಮಹಿಳೆಯರಿಗೆ ತಾತ್ಕಾಲಿಕ ನಿರ್ಬಂಧ

Update: 2021-09-28 21:23 IST

ಕಾಬೂಲ್, ಸೆ.28: ಇಸ್ಲಾಮಿಕ್ ವಾತಾವರಣ ಸೃಷ್ಟಿಯಾಗುವವರೆಗೆ ಮಹಿಳೆಯರು ತರಗತಿಗೆ ಹಾಜರಾಗಲು ಅಥವಾ ಕಾರ್ಯ ನಿರ್ವಹಿಸಲು ಅವಕಾಶವಿಲ್ಲ ಎಂದು ಕಾಬೂಲ್ ವಿಶ್ವವಿದ್ಯಾನಿಲಯದ ನೂತನ ಕುಲಪತಿ ಘೋಷಿಸಿದ್ದಾರೆ.

‌‘ಎಲ್ಲೆಡೆ ಇಸ್ಲಾಮಿಕ್ ವಾತಾವರಣ ನಿರ್ಮಾಣವಾಗುವ ತನಕ ಮಹಿಳೆಯರು ತರಗತಿಗೆ ಹಾಜರಾಗಲು ಅಥವಾ ಉದ್ಯೋಗ ಮಾಡಲು ಅವಕಾಶ ನೀಡಲಾಗದು. ಇಸ್ಲಾಮ್ ಪ್ರಥಮ’ ಎಂದು ಕಾಬೂಲ್ ವಿವಿ ಕುಲಪತಿ ಮುಹಮ್ಮದ್ ಅಶ್ರಫ್ ಘೈರತ್ ಸೋಮವಾರ ಟ್ವೀಟ್ ಮಾಡಿದ್ದಾರೆ. ಘೈರತ್ ರನ್ನು ತಾಲಿಬಾನ್ ನೇತೃತ್ವದ ಸರಕಾರ ನೇಮಕ ಮಾಡಿದೆ.
 
ಈ ಘೋಷಣೆಯನ್ನು ಕಾಬೂಲ್ ವಿವಿಯ ಕೆಲ ಮಹಿಳಾ ಉದ್ಯೋಗಿಗಳು ವಿರೋಧಿಸಿದ್ದು, ಇಸ್ಲಾಮಿಕ್ ವಿಚಾರಧಾರೆಯನ್ನು ವ್ಯಾಖ್ಯಾನಿಸುವ ಏಕಸ್ವಾಮ್ಯವನ್ನು ತಾಲಿಬಾನ್ ಹೊಂದಿದೆಯೇ ಎಂದು ಪ್ರಶ್ನಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಪವಿತ್ರ ಸ್ಥಳದಲ್ಲಿ ಇಸ್ಲಾಮ್ ಗೆ ಹೊರತಾದ್ದು ಯಾವುದೂ ಇಲ್ಲ. ಅಧ್ಯಕ್ಷರು, ಶಿಕ್ಷಕರು, ಇಂಜಿನಿಯರ್ಗಳು ಮತ್ತು ಮುಲ್ಲಾಗಳೂ ಇಲ್ಲಿ ತರಬೇತಿ ಪಡೆದವರು ಮತ್ತು ಸಮಾಜಕ್ಕೆ ಕೊಡುಗೆಯಾಗಿ ನೀಡಲ್ಪಟ್ಟವರು. ಕಾಬೂಲ್ ವಿವಿಯು ಅಫ್ಗಾನ್ ದೇಶದ ಮನೆಯಾಗಿದೆ ಎಂದು ವಿವಿಯ ಉಪನ್ಯಾಸಕಿಯೊಬ್ಬರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಪಿಎಚ್ಡಿ ಪದವೀಧರರಾಗಿದ್ದ ಕುಲಪತಿ ಮುಹಮ್ಮದ್ ಉಸ್ಮಾನ್ ಬಬೂರಿಯನ್ನು ವಜಾಗೊಳಿಸಿದ್ದ ತಾಲಿಬಾನ್, ಈ ಹುದ್ದೆಗೆ ಬಿಎ ಪದವೀಧರ ಮುಹಮ್ಮದ್ ಅಶ್ರಫ್ ಘೈರತ್ರನ್ನು ನೇಮಿಸಿದ ಬಳಿಕ ವಿವಿಯ ಸುಮಾರು 70 ಬೋಧಕ ಸಿಬ್ಬಂದಿ ರಾಜೀನಾಮೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News