ಉಡುಪಿ: ರೈಲು ನಿಲ್ದಾಣದಲ್ಲಿ ಚಂಢೀಗಡದ ಬಾಲಕಿಯ ರಕ್ಷಣೆ
ಉಡುಪಿ, ಸೆ.28: ಹೆತ್ತವರಿಗೆ ಯಾವುದೇ ಮಾಹಿತಿ ನೀಡದೇ ಹತ್ತು ದಿನಗಳ ಹಿಂದೆ ಪಂಜಾಬ್‌ನ ಚಂಢೀಗಢದ ತನ್ನ ಮನೆಯಿಂದ ಓಡಿಬಂದ 16ರ ಹರೆಯ ಬಾಲಕಿಯನ್ನು ಅಲ್ಲಿನ ಪೊಲೀಸರಿಂದ ಬಂದ ಮಾಹಿತಿಯಂತೆ ಉಡುಪಿ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಇಂದು ಪತ್ತೆ ಹಚ್ಚಿದ ರೈಲ್ವೆ ಪೊಲೀಸರು ಆಕೆಯನ್ನು ರಕ್ಷಿಸಿ ಉಡುಪಿಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಾಲಕಿ ಸೆ.18ರಂದು ಹೆತ್ತವರಿಗೆ ತಿಳಿಸದೇ ಮನೆಯಿಂದ ನಾಪತ್ತೆಯಾಗಿದ್ದು, ಅದೇ ದಿನ ಅವರು ಚಂಢೀಗಢದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅದರಂತೆ ಅಲ್ಲಿನ ಪೊಲೀಸರು ಅದೇ ದಿನ ಬಾಲಕಿಯ ಛಾಯಾಚಿತ್ರದೊಂದಿಗೆ ಎಫ್‌ಐಆರ್ ಪ್ರತಿಯನ್ನು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿಯನ್ನು ಪಡೆದ ಉಡುಪಿಯ ಎಎಸ್‌ಐಪಿಎಫ್ ಸುಧೀರ್ ಶೆಟ್ಟಿ ಅವರು ಕಾನ್‌ಸ್ಟೇಬಲ್‌ಗಳಾದ ಶ್ರೀಕಾಂತ್ ಹಾಗೂ ಝೀನಾ ಎಚ್.ಪಿಂಟೊ ಅವರೊಂದಿಗೆ ಇಂದು ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸುತಿದ್ದಾಗ, ಉಡುಪಿ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದ ಬಳಿ ಬಾಲಕಿ, ಯುವಕನೊಬ್ಬನೊಂದಿಗೆ ಇರುವುದನ್ನು ಪತ್ತೆ ಹಚ್ಚಿ ಆರ್‌ಪಿಎಫ್ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದರು.
ವಿಚಾರಣೆಯ ವೇಳೆ 16ರ ಹರೆಯದ ಬಾಲಕಿ ತಂದೆಯ ಹೆಸರು, ವಿಳಾಸ, 10 ದಿನಗಳ ಹಿಂದೆ ಹೆತ್ತವರಿಗೆ ತಿಳಿಸದೇ ಚಂಡೀಗಢದಿಂದ 26ರ ಹರೆಯ ಉತ್ತರ ಪ್ರದೇಶದ ಬಿಜನೂರಿನ ಯುವಕನೊಂದಿಗೆ ಓಡಿಬಂದಿರುವುದನ್ನು ತಿಳಿಸಿದಳು. ಉಡುಪಿಯಿಂದ ಸೂರತ್‌ಗೆ ತೆರಳಲು ಸಿದ್ಧವಾಗಿರುವುದನ್ನು ಅವಳು ಬಹಿರಂಗ ಪಡಿಸಿದ್ದಳು.
ರೈಲ್ವೆ ಪೊಲೀಸರು ಚಂಢೀಗಢ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಬ್ಬರಿಗೂ ಕೋವಿಡ್-19 ಪರೀಕ್ಷೆ ನಡೆಸಿದ ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಉಡುಪಿ ಪೊಲೀಸರು ಬಾಲಕಿ ಹಾಗೂ ಯುವಕನಿಗೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿ ಮುಂದಿನ ಕ್ರಮಕ್ಕಾಗಿ ಚಂಡೀಗಢ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.