×
Ad

ಬಾಲಕನ ಅಪಹರಣ ಯತ್ನ : ದೂರು ದಾಖಲು

Update: 2021-09-28 22:44 IST

ಉಪ್ಪಿನಂಗಡಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 14ರ ಹರೆಯದ ಬಾಲಕನೋರ್ವನನ್ನು ಓಮ್ನಿ ಕಾರಿನಲ್ಲಿ ಬಂದ ಅಪರಿಚಿತನೋರ್ವ ಹಿಡಿದೆಳೆದು ಅಪಹರಣಕ್ಕೆ ಯತ್ನಿಸಿದ ಘಟನೆ ಮಠ ಹಿರ್ತಡ್ಕ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9ನೇ ತರಗತಿ ವಿದ್ಯಾರ್ಥಿ, ಹಿರ್ತಡ್ಕದ ಜನತಾ ಕಾಲನಿ ನಿವಾಸಿ ಅಬ್ದುರ್ರಹ್ಮಾನ್ ಎಂಬವರ ಪುತ್ರ ತಾಜ್ ಸಿಫಾನ್ (14) ಅಪಹರಣಕಾರನಿಂದ ತಪ್ಪಿಸಿಕೊಂಡ ಬಾಲಕ ಎಂದು ತಿಳಿದುಬಂದಿದೆ.

ಈತ ಇಂದು ಸಂಜೆ ಬೀಡಿ ಕೊಡಲೆಂದು ಹಿರ್ತಡ್ಕದಲ್ಲಿರುವ ಬೀಡಿ ಬ್ರಾಂಚ್‌ಗೆ ತೆರಳಿದ್ದು, ಆ ಸಂದರ್ಭ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಓಮ್ನಿ ಕಾರೊಂದು ಈತನಿಗೆ ಗೊತ್ತಾಗದಂತೆ ಈತನ ಹಿಂಬದಿಯಲ್ಲಿ ಬಂದು ಅದರಲ್ಲಿದ್ದಾತ ಈತನ ಅಂಗಿಯ ಕಾಲರ್ ಹಿಡಿದೆಳೆದಿದ್ದು, ಈ ವೇಳೆ ಸಿಫಾನ್ ಓಡಿ ತಪ್ಪಿಸಿಕೊಂಡು ಅಲ್ಲೇ ಸಮೀಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಾನೆ. ಈ ಕಾರು ಕೂಡಾ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದಾಗಿ ಬಾಲಕ ಗಾಬರಿಗೊಂಡಿದ್ದು, ಓಮ್ನಿಯಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಆತನ ಗಮನಕ್ಕೆ ಬಂದಿಲ್ಲವೆನ್ನಲಾಗಿದೆ. ಈ ಬಗ್ಗೆ ಆತನ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News