×
Ad

ಕೆಸ್ಸಾರ್ಟಿಸಿ ವಿಭಾಗವಾರು ಸಿಬ್ಬಂದಿ ನೇಮಕಾತಿಗೆ ಚಿಂತನೆ : ಸಚಿವ ಅಂಗಾರ

Update: 2021-09-28 22:59 IST

ಪುತ್ತೂರು: ಉತ್ತರ ಕರ್ನಾಟಕ ಭಾಗದವರು ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಈ ಭಾಗದಲ್ಲಿ ಕೆಸ್ಸಾರ್ಟಿಸಿಯ ನೌಕರರಾಗಿ ಕೆಲಸ ಮಾಡುತ್ತಿದ್ದು, ಇವರನ್ನು ತವರು ಜಿಲ್ಲೆಗೆ ವರ್ಗಾಯಿಸಿದರೆ ಇಲ್ಲಿ ಸಿಬ್ಬಂದಿ ಕೊರತೆ ಉಂಟಾಗುತ್ತದೆ. ಈ ದಿಸೆಯಲ್ಲಿ ಕೆಸ್ಸಾರ್ಟಿಸಿಯಲ್ಲಿ ಆಯಾ ವಿಭಾಗವಾರು ಸ್ಥಳೀಯ ನೇಮಕಾತಿ ಪದ್ದತಿಯನ್ನು ಮರು ಆರಂಭಿಸುವ ಕುರಿತು ಸಾರಿಗೆ ಸಚಿವರಲ್ಲಿ ಚರ್ಚಿಸಲಾಗಿದೆ. ಈ ಕುರಿತು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಅವರು ಮಂಗಳವಾರ ಕೆಸ್ಸಾರ್ಟಿಸಿ ಪುತ್ತೂರು ವಿಭಾಗದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ನಿವೃತ್ತ ನೌಕರರನ್ನು ಸನ್ಮಾನಿಸಿ ಮಾತನಾಡಿದರು.

ಕೆಸ್ಸಾರ್ಟಿಸಿ ಸಂಸ್ಥೆಯು ಕೊರೋನ ಕಾರಣದಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಆದ ಕಾರಣ ನಿವೃತ್ತ ನೌಕರರ ಸೌಲಭ್ಯ, ಮಾಸಿಕ ವೇತನ ನೀಡಲು ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ಸರ್ಕಾರ ನೌಕರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಬದ್ಧವಾಗಿದೆ. ಕೆಸ್ಸಾರ್ಟಿಸಿ ನೌಕರರು ಈ ವಿಚಾರವನ್ನು ಅರಿತುಕೊಂಡು ಸಂಸ್ಥೆ ಹಾಗೂ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು. 

ಸಮಾರಂಭದಲ್ಲಿ ಕೆಸ್ಸಾರ್ಟಿಸಿ ಪುತ್ತೂರು ವಿಭಾಗದ 25 ಮಂದಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದ ಕೆಸ್ಸಾರ್ಟಿಸಿ ಸಂಚಾರ ನಿಯಂತ್ರಕ ಸತ್ಯಶಂಕರ ಭಟ್, ಪುತ್ತೂರು ವಿಭಾಗ ಸಂಚಲನಾ ಅಧಿಕಾರಿ ಮುರಳೀಧರ ಆಚಾರ್ಯ ಅವರನ್ನು ಸಚಿವರು ಗೌರಿವಿಸಿದರು. ಸಚಿವ ಎಸ್ ಅಂಗಾರ ಮತ್ತು ಶಾಸಕ ಸಂಜೀವ ಮಠಂದೂರು ಅವರನ್ನು ಕೆಸ್ಸಾರ್ಟಿಸಿ ವತಿಯಿಂದ ಸನ್ಮಾನಿಸಲಾಯಿತು. 

ಕೆಸ್ಸಾರ್ಟಿಸಿ ನೌಕರರ ಸಮಸ್ಯೆಯ ಕುರಿತಂತೆ ಸಚಿವ ಅವರಿಗೆ ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ಪುತ್ತೂರು ವಿಭಾಗದ ವತಿಯಿಂದ ಮನವಿ ಸಲ್ಲಿಸಲಾಯಿತು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಸ್ಸಾರ್ಟಿಸಿ ವಿಭಾಗೀಯ ತಾಂತ್ರಿಕ ಶಿಲ್ಪಿ ಆಶಾಲತಾ ಉಪಸ್ಥಿತರಿದ್ದರು. 

ಕೆಸ್ಸಾರ್ಟಿಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಕೆ. ಜಯಕರ ಶೆಟ್ಟಿ ಸ್ವಾಗತಿಸಿದರು. ವಿಭಾಗ ಸಂಚಲನಾ ಅಧಿಕಾರಿ ಮುರಳೀಧರ ಆಚಾರ್ಯ ವಂದಿಸಿದರು. ರಮೇಶ್ ಶೆಟ್ಟಿ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News